ಕುಮಟಾ: ಖ್ಯಾತ ಗಣಿತ ಶಿಕ್ಷಕ, ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಎಚ್.ಎನ್. ಪೈ ಶಿಷ್ಯರು ಹಾಗೂ ಹಿತೈಷಿಗಳು ಅವರನ್ನು ಆತ್ಮೀಯವಾಗಿ ಅಭಿನಂದಿಸುವ “ಗುರುವಂದನಾ” ಕಾರ್ಯಕ್ರಮವು ತಾಲೂಕಿನ ಬಡಗಣಿಯ ಗೋಗ್ರೀನ್ ನಲ್ಲಿ ಜ.21 ರವಿವಾರ ನಡೆಯಲಿದೆ ಎಂದು ಎಚ್.ಎನ್.ಪೈ ಗುರುವಂದನಾ ಸಮಿತಿಯ ಸಂಚಾಲಕ ಮಂಜುನಾಥ ಭಟ್ಟ ಸುವರ್ಣಗದ್ದೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಕೇಂದ್ರಬಿಂದು ಎಚ್.ಎನ್.ಪೈ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ.ಜಿ.ಎನ್ ಹೆಗಡೆ ಉದ್ಘಾಟಿಸುವರು. ಬೆಂಗಳೂರು ವಿಶ್ವವಿದ್ಯಾನಿಲಯದ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಪರಮೇಶ್ವರ ಪಂಡಿತ್ ಅಭಿನಂದನಾ ಗ್ರಂಥ ಬಿಡುಗಡೆ ಮಾಡುವರು. ಮಾರ್ಥೋಮಾ ಶಿಕ್ಷಣ ಸಂಸ್ಥೆಯ ಮ್ಯಾನೇಜರ್ ಫಾದರ್ ಲಿಜೋ ಚಾಕೋ, ಖಜಾಂಚಿ ಕೆ.ಸಿ ವರ್ಗೀಸ್ ಅತಿಥಿಗಳಾಗಿರುವರು.
ಮಧ್ಯಾಹ್ನ ಗ್ರಾಮ ಪಂಚಾಯತ್ ಹಳದೀಪುರದ ಅಧ್ಯಕ್ಷೆ ಪುಷ್ಪಾ ಮಹೇಶ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯುವ ಉಪನ್ಯಾಸ ಕಾರ್ಯಕ್ರಮದಲ್ಲಿ, ಶ್ರೀ ಗುರು ಸುಧೀಂದ್ರ ಕಾಲೇಜ ಭಟ್ಕಳದ ಶ್ರೀನಾಥ ಪೈ ‘ವಿದ್ಯಾರ್ಥಿಗಳ ಭವಿಷ್ಯ ಸವಾಲು ಸಾಧ್ಯತೆಗಳು’ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಡುವರು. ನಂತರ ಗ್ರಾ.ಪಂ ಉಪಾಧ್ಯಕ್ಷ ಅಜಿತ ಮುಕುಂದ ನಾಯ್ಕ ಅಧ್ಯಕ್ಷತೆಯಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಅಪರಾಹ್ನ ಎಚ್.ಎನ್.ಪೈ ಅವರಿಗೆ ಗುರುವಂದನೆ ಕಾರ್ಯಕ್ರಮ ನಡೆಯಲಿದ್ದು ಮಿರ್ಜಾನಿನ ಜನತಾ ವಿದ್ಯಾಲಯದ ಮುಖ್ಯೋಪಾಧ್ಯಾಯ ಪಿ.ಪಿ ಶಾನಭಾಗ ಹಾಗೂ ಸಮಾಜ ಸೇವಕಿ ಲತಿಕಾ ಭಟ್ಟ ಅಭಿನಂದನಾ ನುಡಿ ಆಡಲಿದ್ದಾರೆ. ಸ್ಕೌಟ್ ಮತ್ತು ಗೈಡ್ಸ್ ನ ಜಿಲ್ಲಾ ಆಯುಕ್ತ ಡಾ. ಜಿ.ಜಿ ಸಭಾಹಿತ ಅಧ್ಯಕ್ಷತೆ ವಹಿಸುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆಯ ಸಂಸ್ಥಾಪಕ ಮೋಹನ್ ಆಳ್ವ, ಹಿರಿಯ ಪತ್ರಕರ್ತ ಜಿ.ಯು ಭಟ್ಟ ಹೊನ್ನಾವರ, ಉದ್ಯಮಿ ಮುರಳೀಧರ ಪ್ರಭು ಆತಿಥ್ಯವಹಿಸುವರು. ಇದೇ ಸಭೆಯಲ್ಲಿ ಗಣಿತದ ಅಗಣಿತ ಖಣಿ ಎಚ್.ಎನ್ ಪೈ ಅವರಿಗೆ ಗುರುವಂದನೆ ಸಲ್ಲಿಸಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಎಚ್.ಎನ್ ಪೈ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಕಾರ್ಯಕ್ರಮ ಚಂದಗಾಣಿಸುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ.