ದಾಂಡೇಲಿ : ನಗರದ ಸಾರ್ವಜನಿಕ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಘಟನೆಯು ಗುರುವಾರ ನಗರದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.
ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಘಟನೆಯ ರಾಜ್ಯ ನಿರ್ದೇಶಕರಾದ ಫೈರೋಜ್ ಫಿರ್ಜಾದೆ, ಸಂಘಟನೆಯ ಪದಾಧಿಕಾರಿಗಳಾದ ರವಿ ಸುತಾರ್, ಮಾಜಿ ನಗರಸಭಾ ಸದಸ್ಯ ರಾಮಲಿಂಗ ಜಾಧವ್, ಕರವೇ ಅಧ್ಯಕ್ಷ ಸಾಧಿಕ್ ಮುಲ್ಲಾ ಮೊದಲಾದವರು ಮಾತನಾಡಿ ದಾಂಡೇಲಿಯನ್ನು ತಾಲೂಕನ್ನಾಗಿ ಘೋಷಣೆ ಮಾಡಿ ವರ್ಷ ಐದು ಕಳೆದರೂ ಸಾರ್ವಜನಿಕ ಆಸ್ಪತ್ರೆಯನ್ನು ತಾಲೂಕಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಮನವಿಗಳನ್ನು ನೀಡಲಾಗಿದ್ದರೂ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ. ಶಾಸಕರು ಹಾಗೂ ರಾಜ್ಯದ ಆರೋಗ್ಯ ಸಚಿವರು ನಗರದ ಸಾರ್ವಜನಿಕ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಈ ಬಗ್ಗೆ ತ್ವರಿತಗತಿಯಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳದೇ ಇದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಕೈಗೊಳ್ಳುವುದು ಅನಿವಾರ್ಯ ಎಂದು ಎಚ್ಚರಿಕೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವರಿಗೆ ಬರೆಯಲಾದ ಮನವಿಯನ್ನು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕಅವರ ಮೂಲಕ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಮುಖರುಗಳಾದ ಬಲವಂತ ಬೊಮ್ಮನಳ್ಳಿ, ಗೋವಿಂದ ಮೇಲಗಿರಿ, ಶ್ರೀಕಾಂತ್ ಅಸೋದೆ, ರಾಜಶೇಖರ ನಿಂಬಾಳ್ಕರ್, ಚಂದ್ರಕಾಂತ ನಡಿಗೇರ, ದಾದಾಪೀರ್, ಪವನ್ ಶಾ, ಕರ್ಣಮ್ಮ ತೋಡಟ್ಟಿ, ನಾಗರಾಜ ಪೂಜಾರ, ಸಮೀರ್ ಅಂಕೋಲೆಕರ, ಮಂಜುಳಾ , ಬೇಬಿ, ಸಂಗೀತಾ ಅಮ್ರೆ, ಮೇರಿ, ದಿಲ್ಶಾದ್, ಭಾರ್ಗವಿ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.