Slide
Slide
Slide
previous arrow
next arrow

ವರ್ಕ್‌ ಫ್ರಮ್‌ ಹೋಂ ಮುಗಿಸಿ ಎದ್ದು ಬಂದ ಉತ್ತರ ಕನ್ನಡದ ರಣಭೈರವನಿಗೆ ದಶ ಪ್ರಶ್ನೆಗಳು

300x250 AD

ಕೆನರಾ ಸಂಸದರಾದ ಅನಂತಕುಮಾರ ಹೆಗಡೆಯವರೇ,

ನಾನು, ಅಭಿವೃದ್ಧಿ ಎಂಬುದು ಬಹು ಆಯಾಮದ ವಿಷಯ, ಕೇವಲ ರಸ್ತೆ, ಆಸ್ಪತ್ರೆಯಂಥ ಮೂಲ ಸೌಕರ್ಯಗಳಷ್ಟೇ ಅಭಿವೃದ್ಧಿಯ ಮಾನದಂಡಗಳಲ್ಲ ಎಂಬುದನ್ನು ನೂರಕ್ಕೆ ನೂರರಷ್ಟು ಒಪ್ಪುವ ಒಬ್ಬ ಮತದಾರನಾಗಿ ಹಾಗೂ ಹುಬ್ಬಳ್ಳಿ ಈದ್ಗಾ ಮೈದಾನದ ಹೋರಾಟದಲ್ಲಿ, ಭಟ್ಕಳ ಗಲಭೆ ಸಂದರ್ಭದಲ್ಲಿ ಅನಂತಕುಮಾರ ಹೆಗಡೆ ಎಂಬುವವ ಚಂಡ ಪ್ರಚಂಡ ರಣಭೈರವನೇ ಆಗಿದ್ದ ಎಂಬುದನ್ನು ಮನಃಪೂರ್ವಕವಾಗಿ ಒಪ್ಪಿ ನಿಮ್ಮ ಅಭಿಮಾನಿಯಾಗಿ, ನಿಮಗೆ ಒಂದಷ್ಟು ಪ್ರಶ್ನೆಗಳನ್ನ ಬಹಿರಂಗವಾಗಿ ಕೇಳುತ್ತಿದ್ದೇನೆ, ಸಾಧ್ಯವಾದರೆ ಉತ್ತರಿಸಿ.

  1. ಈಗೊಂದು 10-15 ದಿನಗಳ ಹಿಂದೆ ನೀವು ವರ್ಕ್‌ ಫ್ರಮ್‌ ಹೋಂ ಮುಗಿಸಿ ಮೊದಲು ಬಹಿರಂಗವಾಗಿ ಕಾಣಿಸಿಕೊಂಡು ನಿಮ್ಮ ಮನೆ ಬಾಗಿಲಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿದಾಗ “ಈವರೆಗೆ ನಿಮ್ಮಿಂದ ದೂರ ಇದ್ದೆ ಕ್ಷಮಿಸಿ” ಎಂದು ಕೇಳಿಕೊಂಡಿದ್ದೀರಲ್ಲಾ ಯಾಕೆ? ಈ ನಾಲ್ಕು ವರ್ಷ ಏನೂ ಕೆಲಸ ಮಾಡದೆ ಇದ್ದುಬಿಟ್ಟೆನಲ್ಲಾ ಎಂಬ ಪಾಪ ಪ್ರಜ್ಞೆ ಕಾಡಿತೆ ?
  2. ಹಾರ ತುರಾಯಿ ಸನ್ಮಾನ ಮಾಡಿಸಿಕೊಳ್ಳುತ್ತ, ಸಭೆ ಸಮಾರಂಭಗಳಲ್ಲಿ ಭಾಷಣ ಕುಟ್ಟುತ್ತ, ಗುದ್ದಲಿ ಪೂಜೆ, ಶಂಕುಸ್ಥಾಪನೆ ಮಾಡುವ ಪುಢಾರಿಗಳು, ಚುನಾವಣಾ ರಾಜಕಾರಣಿಗಳು ನಮಗೂ ಬೇಕಿಲ್ಲ. ಹಾಗಂತ ಒಮ್ಮೆ ಗೆದ್ದ ಮೇಲೆ ಮತ್ತೊಂದು ಚುನಾವಣೆ ಬಂದಾಗಲಷ್ಟೇ ಕಾಣಿಸಕೊಳ್ಳುವವರನ್ನ 30 ವರ್ಷದ ಹಿಂದೆ ಮಾಡಿದ ಹೋರಾಟದ ನೆಪದಲ್ಲಿ ಇನ್ನೂ ಸಹಿಸಿಕೊಳ್ಳಬೇಕೇಕೆ ?
  3. ಹುಲಿ ಸಿಂಹ ಎಂಬ ಬಿರುದು ಇಟ್ಟುಕೊಂಡು ಗುಹೆಯಲ್ಲೇ ಕುಳಿತು ಬಿಟ್ಟರೆ, ಕಂಡ ಕಂಡವರೆಲ್ಲಾ ಕಾಡಿಗೆ ನುಗ್ಗುವದಿಲ್ಲವೇ ? ನಿಮ್ಮದೇ ಕಾರ್ಯಕರ್ತರನ್ನ ಆತ್ಮೀಯವಾಗಿ ಮಾತನಾಡಿಸಿ ಯಾವ ಕಾಲವಾಯಿತೆಂಬುದು ನೆನಪಿದೆಯೆ ? ಪಕ್ಷ ಸಂಘಟನೆ ಮಾಡದಿದ್ದರೂ ಪರವಾಗಿಲ್ಲ, ಅದನ್ನೆಲ್ಲ ಪಕ್ಷಾಧ್ಯಕ್ಷನೋ ಮತ್ತೊಬ್ಬನೋ ಮಾಡಲಿ, ಏಕೆಂದರೆ ನೀವು ಎಲ್ಲರಂತಲ್ಲ. ಆದರೆ ಹಿಂದೂ ಸಂಘಟನೆಯನ್ನೂ ನೀವು ಮರೆತಂತೆ ಕಾಣುತ್ತದೆಯಲ್ಲಾ? ಆಗೊಮ್ಮೆ ಈಗೊಮ್ಮೆ ದೀಪಾವಳಿ, ಯುಗಾದಿಗೆ ಮತ್ಯಾವಾಗಲೋ ಶುಭಾಶಯ ಕೋರುವ ಮೆಸೇಜ್‌ ಹಾಕಿದ್ದು, ಎಲ್ಲೋ ಒಂದೆರಡು ಪತ್ರಿಕಾ ಹೇಳಿಕೆ (ಅದೂ ಸಂಸದರ ಆಪ್ತ ಕಾರ್ಯದರ್ಶಿ ಮೂಲಕ) ನೀಡಿದ್ದು ಬಿಟ್ಟರೆ ಕಳೆದ 3-4 ವರ್ಷದಲ್ಲಿ ಹಿಂದೂ ಸಂಘಟನೆಗಾಗಿ ಕ್ಷೇತ್ರ ಮಟ್ಟದಲ್ಲಿ ಏನು ಮಾಡಿದ್ದೀರಿ ? ಒಬ್ಬ ಚುನಾಯಿತ ಜನಪ್ರತಿನಿಧಿಯಾದವನು ಬಹುಸಂಖ್ಯಾತ ಹಿಂದೂಗಳ ಪರವಾಗಿ ಇದ್ದಾನೆ ಎಂಬುದು ಒಳ್ಳೆಯ ಸಂಗತಿ. ಹೋಳಿ ಹಬ್ಬದಲ್ಲಿ ಬಣ್ಣ ಹಚ್ಚಿಕೊಂಡರೆ ಸಾಕೇ ? ನಿಮ್ಮ ಹಿಂದುತ್ವ ನಮ್ಮೆಲ್ಲರಲ್ಲಿ ಇನ್ನಷ್ಟು ಧೈರ್ಯ ಮೂಡಿಸಲು ವಿಫಲವಾಗಿದೆಯಲ್ಲಾ ಏಕೆ?
  4. ನಿಮ್ಮ ಸೋಷಿಯಲ್‌ ಮೀಡಿಯಾ ಭಕ್ತರ ಪ್ರಕಾರ ಸಂಸದರ ನಿಧಿ (MPLADS), ಮತ್ತೊಂದ್ಯಾವುದೋ ಅನುದಾನದ ಬಳಕೆಯಲ್ಲಿ ನೀವು ಪ್ರಮುಖರಂತೆ.‌ ಆದರೆ ಇದೊಂದರಿಂದಲೇ ಈ ಸಲವೂ ಮತದಾರರಿಗೆ ಲಾಡು ತಿನ್ನಿಸುವ ಯೋಚನೆಯಿದೆಯೆ? ನೀವಲ್ಲದೇ ಯಾರೇ ಸಂಸದರಾದರೂ ವರ್ಷಕ್ಕೆ 5 ಕೋಟಿಯ ಕಾಮಗಾರಿಗಳನ್ನು ಸೂಚಿಸುವದು, ಅದರ ಆಗು ಹೋಗುಗಳನ್ನ ಜಿಲ್ಲಾಧಿಕಾರಿ ಬಳಿ ಹೇಳಿ ಕೇಳಿ ಮಾಡುವದೇನು ದೊಡ್ಡ ವಿಷಯವೇ? ನಿಮ್ಮನ್ನ ಚುನಾಯಿಸಿದ್ದೇ ಅದಕ್ಕಲ್ಲವೆ? ಅದೇನೂ ಇರಲಿ ನಿಮ್ಮ ಯಾವ ವಿಶೇಷ ಪ್ರಯತ್ನದಿಂದಾಗಿ ಸಂಸದರ ನಿಧಿಗೆ ಸಂಬಂಧ ಪಡದ ಹೆಚ್ಚಿನ ಅನುದಾನ / ಯೋಜನೆ ತಂದಿದ್ದೀರಿ ಎಂಬುದನ್ನ ಹೇಳಬಲ್ಲಿರಾ ? 30 ವರ್ಷಗಳ ತಮ್ಮ ಅಧಿಕಾರಯುಕ್ತ ರಾಜಕೀಯ ಅನುಭವದಿಂದಾಗಿ, ಈ ಅವಧಿಯಲ್ಲಿ ಎಂಥೆಂಥ ಅಧಿಕಾರಿಗಳು, ತಜ್ಞರು, ಉದ್ಯಮಿಗಳ ಸಂಪರ್ಕದಿಂದ, ಗೆಳೆತನ ಸಾಧ್ಯವಾಯಿತು ಅದರಿಂದಾಗಿ ಜಿಲ್ಲೆಗೆ ಯಾವ ರೀತಿ ವಿಶೇಷ ಲಾಭ ಆಗಿದೆ ಎಂಬುದನ್ನು ತಿಳಿಸುವಿರಾ ?
  5. ರಸ್ತೆ, ಚರಂಡಿ ರಿಪೇರಿಗೆಲ್ಲ ಕೆಳಸ್ತರದ ಅಧಿಕಾರಿ/ಜನಪ್ರತಿನಿಧಿಗಳನ್ನು ಕೇಳಬೇಕು ಹೊರತಾಗಿ ಲೋಕಸಭಾ ಸದಸ್ಯರನ್ನಲ್ಲ ಎಂಬ ವಿವೇಚನೆ ನಮಗಿದೆ. ಆದರೆ ಇದೊಂದೇ ನೆಪ ಹೇಳುತ್ತ ನೀವು ಎಲ್ಲ ಜವಾಬ್ದಾರಿ/ಕೆಲಸದಿಂದ ನುಣುಚಿಕೊಳ್ಳುವದೇಕೆ ? ದೂರವಾಣಿಗೆ ಸಂಬಂದಿಸಿದ ಸಮಸ್ಯೆಗಳನ್ನ ಗ್ರಾಮ ಪಂಚಾಯತಿ ಅಧ್ಯಕ್ಷ ಸರಿ ಪಡಿಸಬಲ್ಲನೆ ? ಹೆದ್ದಾರಿ ಕಾಮಗಾರಿ ಆಗಿಲ್ಲವೆಂದರೆ ಜಿ.ಪಂ ಸದಸ್ಯನನ್ನ ಕೇಳಬೇಕೆ? ಸುವರ್ಣ ಟಿವಿ ಯಲ್ಲಿ ಬರುವ ನ್ಯೂಸ್‌ಅವರ್‌ ಸ್ಪೆಶಲ್‌ ಕಾರ್ಯಕ್ರಮದಲ್ಲಿ ಪ್ರತಾಪ ಸಿಂಹರ ಕಾರ್ಯಕ್ರಮವನ್ನು ನೋಡಿದಾಗಲೆಲ್ಲ ನಮಗ್ಯಾಕೆ ಅವರಂಥ ಎಂಪಿ ಸಿಗಲಿಲ್ಲವೆಂದು ಹೊಟ್ಟೆಯುರಿಯುತ್ತದೆ. ಒಬ್ಬ ಎಂಪಿ ಏನೆಲ್ಲಾ ಮಾಡಬಹುದು ಅವನ ಕಾರ್ಯವ್ಯಾಪ್ತಿ ಎಷ್ಟು, ಸರ್ಕಾರದ ಕಾರ್ಯವಿಧಾನ ಹೇಗಿರುತ್ತೆ ಅನ್ನುವದನ್ನ ಅವರು ಸ್ಪಷ್ಟವಾಗಿ ಅರ್ಥಮಾಡಿಸಿದ್ದಕ್ಕೇ ಈಗ ನಿಮ್ಮನ್ನ ಪ್ರಶ್ನಿಸುತ್ತಿರುವದು.
  6. ಪ್ರತಾಪ ಸಿಂಹರೂ ತಾನು ಚುನಾವಣಾ ರಾಜಕಾರಣಿಯಲ್ಲ, ಮತದಾರರಿಗೆ ಒಬ್ಬ ಲೋಕಸಭಾ ಸದಸ್ಯನಲ್ಲಿ ಏನನ್ನು ಕೇಳಬೇಕು, ಅವನಿಂದ ಏನು ಅಪೇಕ್ಷಿಸಬೇಕೆಂಬುದೇ ಗೊತ್ತಿಲ್ಲ, ಅಭಿವೃದ್ಧಿ ಅಂದರೆ ಕೇವಲ ರಸ್ತೆಯಲ್ಲ ಇತ್ಯಾದಿ ಇತ್ಯಾದಿಯನ್ನ ಥೇಟ್‌ ನಿಮ್ಮಂತೆಯೇ ಅನೇಕ ಬಾರಿ ಹೇಳಿದ್ದನ್ನ ಕೇಳಿದ್ದೇವೆ. ಆದರೆ ಅವರು ಕೆಲಸ ಮಾಡಿದ್ದನ್ನೂ ಕಂಡಿದ್ದೇವೆ. ಆದರೆ ನೀವು ? ಜಿಲ್ಲಾ ಮಟ್ಟದಲ್ಲಿ ಆಗೊಮ್ಮೆ ಈಗೊಮ್ಮೆ ದಿಶಾ ಸಭೆ ಮಾಡಿದಿರಂತೆ ಎಂಬುದನ್ನ ಪತ್ರಿಕೆಯಲ್ಲಿ ಓದಿದ್ದಷ್ಟೇ – ದೊಡ್ಡ ಯೋಜನೆಗಳು ಬಿಡಿ ದಿಶಾ ಸಭೆಯ ನಡಾವಳಿಗಳು, ಠರಾವುಗಳು ಏನಾದವು ಎಂಬುದನ್ನಾದರೂ ನೀವು ಜನರಿಗೆ ತಿಳಿಸಬಹುದಿತ್ತು.
  7. ಅದ್ಯಾವುದೋ ನ್ಯಾನೋ ಟೆಕ್ನಾಲಜಿಯಲ್ಲಿ ಔಷಧಿ💊 ತಯಾರಿಸುತ್ತಿದ್ದೀರಿ ಎಂದಿದ್ದೀರಿ ಆಗಲಿ ಆದಷ್ಟು ಬೇಗ ಯಶಸ್ವಿಯಾಗಿ. ಆದರೆ ಈ ಹಿಂದೆ ಹಾರಿಸಿದ ಕಲರ್‌ ಕಲರ್‌ ಕಾಗೆಗಳಾದ ಅಗರ್ವುಡ್ಡು, ಮಹಾಭಾರತದ ಅರಗು, ಚಿಯಾ ಸಿರಿಧಾನ್ಯಗಳೆಲ್ಲ ಎಲ್ಲಿ ಹಾರಿ ಹೋದವು ? ಆಗುಹೋಗದ ಇವನ್ನೆಲ್ಲಾ ಬಿಟ್ಟು ನಮ್ಮಲ್ಲಿಗೆ ಯೋಗ್ಯವಾದ ಏನಾದರೂ ಮಾಡಿದ್ದರೆ ರೈತರು ನಿಮಗೆ ಋಣಿಯಾಗಿರುತ್ತಿದ್ದರೇನೋ ! ಕೇಂದ್ರ ಸರ್ಕಾರದ ICAR ಅಧೀನದಲ್ಲಿ ಬರುವ KVK ಗಳ ಮೂಲಕ ಒಬ್ಬ ಸಂಸದರಾದ ನಿಮಗಿಂತ ಸ್ಥಳೀಯ ಸಹಕಾರಿ ಸಂಸ್ಥೆಗಳೇ ರೈತರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿವೆಯೆಂದು ಎಂದೂ ಅನ್ನಿಸಿಲ್ಲವೆ ? ಕರಾವಳಿ ಭಾಗದಲ್ಲಿ ಅದೇನೋ ಮೀನು ಹಿಡಿಸುತ್ತೇನೆ ಎಂದಿದ್ದೀರಲ್ಲ , ಸಮುದ್ರದ ಅಲೆಗಳಿಂದ ಕರೆಂಟ್‌ ಉತ್ಪಾದಿಸಿ ಎಲ್ಲರಿಗೂ ಶಾಕ್‌ ಹೊಡೆಸುವವರಿದ್ದಿರಲ್ಲ ಅದೆಲ್ಲ ಏನಾಯಿತು ? ಮುತ್ತು ಕೃಷಿ ಮಾಡಿಸಿದ್ದಷ್ಟೇ ಗೊತ್ತು ಆದರೆ ಯಾರಿಗೆ ಎಷ್ಟು ಮುತ್ತು ಕೊಟ್ಟಿರಿ ಎಂಬುದು ಮಾತ್ರ ಗೊತ್ತಾಗಲಿಲ್ಲ !!
  8. ಉತ್ತರ ಕನ್ನಡದ ಪರಿಸರ ಹಾಳು ಮಾಡಿ ಗ್ಲೋಬಲ್‌ ವಾರ್ಮಿಂಗ್‌ ಗೆ ಕಾರಣವಾಗುವಂಥ ಯಾವ ಯೋಜನೆಗಳನ್ನೂ ತರಬೇಕೆಂದು ಬಯಸುವವರು ನಾವಲ್ಲ. ಆದರೆ ಪರಿಸರಕ್ಕೆ ಪೂರಕವಾದದ್ದನ್ನಾದರೂ ಏನು ಮಾಡಿದ್ದೀರಿ ? ಕಾರ್ಬನ್‌ ಕ್ರೆಡಿಟ್‌ ನಿಂದ ಅಡಿಕೆ ಕೃಷಿಕರೂ ಲಕ್ಷ ಲಕ್ಷ ದುಡ್ಡೆಣಿಸಬಹುದೆಂಬ ಬೇರೊಂದು ಕಲರ್‌ ಕಾಗೆ ಹಾರಿಸಿದ್ದಷ್ಟೇ ಅಲ್ಲವೇ ನೀವು ಮಾಡಿದ್ದು ?
  9. ಚುನಾವಣೆ ಎದುರಿಗೆ ಬಂದಾಗ ರೋಷಾವೇಷ ತೋರಿಸಿ, ಕುಣಿದು ಕುಪ್ಪಳಿಸಿ ಬಂದ ಕೆಲಸವಾದ ನಂತರ ಗುಹೆ ಸೇರಿ ಮತ್ತೈದು ವರ್ಷ ಬಿಟ್ಟು ಹೊರಬರುವ 🐅ಹುಲಿಯನ್ನ ಇವತ್ತೇನು ನಾವು ನೋಡುತ್ತಿರುವದು ? ಈ ಬಾರಿಯೂ ಹೀಗಾಗದು ಎಂಬುದಕ್ಕೆ ಗ್ಯಾರಂಟಿಯೇನು? ನಿಮ್ಮ ಜ್ಞಾನ, ನೈಜ ಸಾಮರ್ಥ್ಯದ ಅರಿವು ನಿಮಗಿದ್ದದ್ದೇ ಆದರೆ ಕೇಂದ್ರ ಮಂತ್ರಿಯಾಗಿದ್ದಾಗ ನೀರಿಲ್ಲದ ಬಾವಿಯಿಂದಲೂ ಎಷ್ಟೋ ಡ್ಯಾಂ ಗಳನ್ನು ತುಂಬಿಸಬಲ್ಲಷ್ಟು ನೀರು ತೆಗೆಯಬಹುದಾಗಿತ್ತು. ರಿಯಲ್‌ ಎಸ್ಟೇಟ್‌ ಕುಳಗಳು, ಹತ್ತು ಪೈಸಾ ಕೆಲಸಕ್ಕೆ ಬಾರದ ಅಯೋಗ್ಯರನ್ನೇ ನಿಮ್ಮ ಸಲಹೆಗಾರರಾಗಿ, ಬಾಲಬಡುಕರನ್ನಾಗಿ ಇಟ್ಟು ಕೊಂಡದ್ದರಿಂದಲೇ ನಿಮ್ಮನ್ನು ಇಷ್ಟೆಲ್ಲಾ ಪ್ರಶ್ನೆ ಮಾಡುವಂತಾಗಿದೆಯೆಂಬುದು ಅರಿವಾಗುತ್ತಿಲ್ಲವೆ?
  10. ಎಲ್ಲೆಲ್ಲೋ ಅಚ್ಚರಿಯ ಆಯ್ಕೆ ಮಾಡುವ ಬಿಜೆಪಿ ಉತ್ತರ ಕನ್ನಡದಲ್ಲೂ ಈ ಬಾರಿ ಹಾಗೆಯೇ ಮಾಡುವ ಸಾಧ್ಯತೆ ಇದೆಯೆ ? ಹಿಂದೆರಡು ಬಾರಿಯಂತೂ ಮೋದಿ ಅಲೆಯಲ್ಲಿ ಅನೇಕ ಕಸ ಕಡ್ಡಿಗಳು ಸುರಕ್ಷಿತವಾಗಿ ದಡ ಸೇರಿದ್ದವು. ಈ ಬಾರಿಯೂ ನಿಮ್ಮನ್ನೇ ಸಹಿಸಿಕೊಳ್ಳಬೇಕಾದ ಅನಿವಾರ್ಯ ಕರ್ಮ ನಮ್ಮ ಪಾಲಿಗಿದೆಯೇ ಅಥವಾ ನಿಮ್ಮ ಉತ್ತರಾಧಿಕಾರಿಯನ್ನಾಗಿ ಯಾರನ್ನಾದರೂ ಚುನಾವಣೆಗಾಗಿ ನಿಲ್ಲಿಸಲು ಇಷ್ಟೆಲ್ಲಾ ಓಡಾಟ ಹಾರಾಟವೆ?

🫏ಕತ್ತೆಯನ್ನು ನಿಲ್ಲಿಸಿದರೂ ಮೋದಿಗಾಗಿ ಓಟು ಒತ್ತುವ ನಮ್ಮಂಥ ಮತದಾರರಿಗೆ ದಯವಿಟ್ಟು ಉತ್ತರಿಸಿ ಸಹಕರಿಸಿ,
ಧನ್ಯವಾದ 🙏🏼
ನೊಂದ ಮತದಾರ 😔

300x250 AD

Share This
300x250 AD
300x250 AD
300x250 AD
Back to top