ಬನವಾಸಿ: ಜ.22ರಂದು ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪೂಜೆ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆ ಹಾಗೂ ಆಮಂತ್ರಣ ಪತ್ರಿಕೆ ವಿತರಿಸುವ ಅಭಿಯಾನವನ್ನು ಪಟ್ಟಣದ ಜನತಾ ಕಾಲೋನಿಯಲ್ಲಿ ನಡೆಸಲಾಯಿತು.
ಇಲ್ಲಿನ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜನತಾ ಕಲೋನಿ, ಸೊರಬ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಶ್ರೀರಾಮ ಮಂದಿರದ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಪೂಜೆಯ ಸಂದೇಶ ಸಾರಿದರು. ಅಯೋಧ್ಯೆ ಶ್ರೀರಾಮ ಜನ್ಮಭೂಮಿಯ ರಾಮತೀರ್ಥ ಟ್ರಸ್ಟ್ ಮನವಿಯಂತೆ ಎಲ್ಲ ಜನರು ಜ. 22ರಂದು ಶ್ರೀರಾಮನ ಪೂಜೆ, ಸಂಕೀರ್ತನೆ ಮಾಡಬೇಕು. ಸಿಹಿ ಹಂಚಿ ಸಂಜೆ ಐದು ದೀಪಗಳನ್ನು ಮನೆ ಮುಂದೆ ಹಂಚಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುಧೀರ್ ನಾಯರ್, ಶಿವರಾಜ ಆಚಾರ್ಯ, ಮಯೂರ ಬೊಂಗಾಳೆ, ಇಕೋ ಮಂಜು, ರಮೇಶ ಪಟೇಲ್, ಅಣ್ಣಪ್ಪ ಮತ್ತಿತರರು ಇದ್ದರು.