ಶಿರಸಿ : ಶಿರಸಿ ತಾಲೂಕ ಗ್ರಾಮೀಣ ವಿಭಾಗದ ಆರ್ಯ, ಈಡಿಗ, ನಾಮಧಾರಿ ಬಿಲ್ಲವ ಸಮಾಜ ಬಾಂಧವರಿಂದ ಜ.28ರಂದು ತಾಲೂಕಿನ ದೇವನಳ್ಳಿಯಲ್ಲಿ ಗುರುವಂದನಾ ಕಾರ್ಯಕ್ರಮ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಾಗೂ ಸಚಿವರು ಮತ್ತು ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕುಲ ಗುರುಗಳಾದ ಉಜಿರೆಯ ಶ್ರೀರಾಮ ಕ್ಷೇತ್ರದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮಿಗಳು ಹಾಗೂ ಅಂಡಗಿ ಮಠದ ಶ್ರೀ ಕಲ್ಯಾಣ ಸ್ವಾಮಿಗಳು ಇವರ ದಿವ್ಯ ಸಾನಿಧ್ಯದಲ್ಲಿ ಗುರುವಂದನಾ ಕಾರ್ಯಕ್ರಮ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ನಿಮಿತ್ತ ಅಂದು ಬೆಳಿಗ್ಗೆ 9-30 ಗಂಟೆಗೆ ದೇವನಳ್ಳಿಯಿಂದ ಕಾರ್ಯಕ್ರಮ ನಡೆಯುವ ಸ್ಥಳ ಸುಂಡಳ್ಳಿಯವರೆಗೆ ಪೂರ್ಣಕುಂಭ ಮೇಳದೊಂದಿಗೆ ಕುಲಗುರುಗಳ ಭವ್ಯ ಮೆರವಣಿಗೆ ಇರಲಿದೆ. ನಂತರ ಬೆಳಿಗ್ಗೆ 11-00 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಗುರುಗಳ ಪಾದಪೂಜೆ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 11-30 ರಿಂದ ಸಭಾಕಾರ್ಯಕ್ರಮ ಇರಲಿದ್ದು, ಶಾಸಕ ಭೀಮಣ್ಣ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಮಧು ಬಂಗಾರಪ್ಪ ಉದ್ಘಾಟನೆ ಮಾಡಲಿದ್ದು, ಮಾಜಿ ಶಾಸಕ ಸುನೀಲ್ ನಾಯ್ಕ, ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಉದ್ಯಮಿ ಶಂಕರ ದಿವೇಕರ, ಸಮಾಜದ ಶಿರಸಿ ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ, ಗುರುವಂದನಾ ಸಮಿತಿ ಅಧ್ಯಕ್ಷ ಸುರೇಶ ನಾಯ್ಕ ಉಪಸ್ಥಿತರಿರಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಸಾಧಕರಿಗೆ ಸನ್ಮಾನ, ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳಿಂದ ಆಶೀರ್ವಚನ, ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7-00 ರಿಂದ 9-00 ಗಂಟೆಯವರೆಗೆ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಇನ್ನು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆಮಂತ್ರಣ ಪತ್ರಿಕೆಯನ್ನು ಇತ್ತೀಚಿಗೆ ದೇವನಹಳ್ಳಿಯಲ್ಲಿ ಬಿಡುಗಡೆ ಮಾಡಲಾಯಿತು. ಪ್ರಮುಖರಾದ ಸುರೇಶ ನಾಯ್ಕ, ಮಧುಕರ ನಾಯ್ಕ, ರಮಾನಂದ ನಾಯ್ಕ, ರಮಾಕಾಂತ ನಾಯ್ಕ, ರಮೇಶ ನಾಯ್ಕ ಇತರರು ಇದ್ದರು.