ಭಟ್ಕಳ: ಕಳೆದ ಎರಡು ದಿನದಿಂದ ಜಾಲಿ ದೇವಿನಗರದ ನಾಮಫಲಕ ಅಳವಡಿಕೆ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ತಕ್ಷಣ ಪೊಲೀಸರ ಆಗಮನದಿಂದ ಪರಿಸ್ಥಿತಿ ಹತೋಟಿಗೆ ಬಂದಿದ್ದು ಸೋಮವಾರದಂದು ನಾಮಫಲಕದ ಅಳವಡಿಕೆಗೆ ಮುಂದಾದ ಸ್ಥಳೀಯರು, ಹಿಂದು ಮುಖಂಡರಿಗೆ ಪೋಲೀಸರು ಅಡ್ಡಿ ಪಡಿಸಿದ್ದು ಗಂಟೆಗಟ್ಟಲೇ ಮಾತಿನ ಪ್ರಹಾರ ನಡೆಯಿತು.
ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ದೇವಿ ನಗರದ ರಸ್ತೆಯ ಬದಿಯಲ್ಲಿ ಕಳೆದ 40 ವರ್ಷಗಳಿಂದ ದೇವಿನಗರ ಹೆಸರಿನ ಕಲ್ಲಿನಿಂದ ಕಟ್ಟಿದ ನಾಮಫಲಕವಿದ್ದು, ಅದನ್ನು ಊರಿನ ಗ್ರಾಮಸ್ಥರು ಪ್ರತಿವರ್ಷ ಹೊಸ ಬಣ್ಣ ಬಳಿದು ಸ್ವಚ್ಛಗೊಳಿಸಿ ನವೀಕರಣಗೊಳಿಸುತ್ತಾ ಬಂದಿದ್ದು ಅದೇ ರೀತಿ ಈ ವರ್ಷ ಬಣ್ಣ ಬಳಿದು ನವೀಕರಣಗೊಳಿಸುವುದರ ಜೊತೆಗೆ ಪ್ರಸ್ತುತ ನಾಮಫಲಕ ನೆಲಮಟ್ಟದಲ್ಲಿರುವುದರಿಂದ ಎತ್ತರದಲ್ಲಿ ಕಾಣಿಸುವಂತೆ ಅದಕ್ಕೆ ಕಬ್ಬಿಣದ ನಾಮಫಲಕ ಅಳವಡಿಸಲು ಗ್ರಾಮಸ್ಥರು ನಿರ್ಧರಿಸಿ, ಮಕರ ಸಂಕ್ರಮಣದ ಶುಭ ದಿನದಂದು ಜನವರಿ 14 ರಂದು ನಾಮಫಲಕದ ಕಂಬವನ್ನು ಹುಗಿಯಲಾಗಿತ್ತು.
ಅದೇ ದಿನ ಸಂಜೆ ಯಾರೋ ಕಿಡಿಗೇಡಿಗಳು ಮದರಸಾದ ಮೇಲೆ ಕೇಸರಿ ಬಾವುಟ ಹಾರಿಸುತ್ತಾರೆ ಎಂದು ವಾಟ್ಸಾಪ್ ನಲ್ಲಿ ಮೆಸೇಜ್ ಬರೆದು ಹಾಕಿರುವುದು ಘಟನೆಯ ಸಂಬಂಧ ಸ್ಥಳಕ್ಕೆ ಬಂದ ಪೋಲಿಸರು ಕಬ್ಬಿಣದ ನಾಮಫಲಕ ಹಾಕುವುದನ್ನು ತಡೆದಿದ್ದು, ನಂತರ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿಗಳನ್ನು ಫೋನ್ ಮೂಲಕ ಪೋಲಿಸರ ಸಮ್ಮುಖದಲ್ಲಿ ಸಂಪರ್ಕಿಸಿ ಮಾತನಾಡಿದಾಗ ಅವರು ಸೋಮವಾರದಂದು ಬೆಳಿಗ್ಗೆ 9 ಗಂಟೆಗೆ ತಾನು ನಾಮಫಲಕ ಹಾಕುವ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಲಿದ್ದು, ಆ ಸಮಯದಲ್ಲಿ ಗ್ರಾಮಸ್ಥರಿಗೆ ಬರುವಂತೆ ಸೂಚನೆ ನೀಡಿದ್ದರಿಂದ ಎಲ್ಲಾ ಗ್ರಾಮಸ್ಥರು ಮರುದಿನ ಬೆಳಿಗ್ಗೆ 9 ಗಂಟೆಗೆ ಸ್ಥಳಕ್ಕೆ ಬಂದಿದ್ದಾರೆ.
ಸೋಮವಾರದಂದು ಬೆಳಿಗ್ಗೆ 9 ಗಂಟೆಗೆ ಬಂದಾಗ, ನಾಮಫಲಕದ ಪಕ್ಕದಲ್ಲಿ ಹೂಗಿದ ಕಂಬ ಕಾಣೆಯಾಗಿರುವುದನ್ನು ಗ್ರಾಮಸ್ಥರು ಮತ್ತು ಹಿಂದು ಮುಖಂಡರು ಪೋಲಿಸರಿಗೆ ಪ್ರಶ್ನಿಸಿದಾಗ, ಮಧ್ಯರಾತ್ರಿ ಸಮಯದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಕಿತ್ತುಕೊಂಡು ಹೋಗಿದ್ದಾರೆಂದು ಸ್ಥಳೀಯರು ಪೋಲೀಸರಲ್ಲಿ ದೂರಿದರು.
ಮುಖ್ಯಾಧಿಕಾರಿಗಳು ಸಮಸ್ಯೆ ಬಗೆಹರಿಸಲು ಮಾತನಾಡಲು ಗ್ರಾಮಸ್ಥರಿಗೆ ಸೋಮವಾರದಂದು ಬೆಳಿಗ್ಗೆ 9 ಗಂಟೆಗೆ ಬರಲು ಹೇಳಿ, ಖುದ್ದು ರಾತ್ರೋರಾತ್ರಿ ಕಂಬವನ್ನು ತೆಗೆದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಹಿಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಇದ್ದ ಹಳೆಯ ನಾಮಫಲಕವನ್ನು ತೆಗೆದು ಹೊಸ ನಾಮಫಲಕ ಹಾಕಲು ಗ್ರಾಮಸ್ಥರಿಗೆ ಅವಕಾಶ ಇಲ್ಲವೇ ನಮಗೆ ಒಂದು ಕಾನೂನು ಇನ್ನೊಂದು ಸಮುದಾಯದ ಜನರಿಗೆ ಒಂದು ಕಾನೂನು ಎಂದು ಹಿಂದು ಕಾರ್ಯಕರ್ತರು ಪ್ರಶ್ನಿಸಿದರು. ಕೇವಲ ಮಾತುಕತೆಯ ಮೂಲಕ ಬಗೆಹರಿಯುವ ಸಮಸ್ಯೆಯನ್ನು ರಾತ್ರೋ ರಾತ್ರಿ ಬಂದು ಕಂಬ ಕಿತ್ತಿದ್ದಾರೆಂದು ಗ್ರಾಮಸ್ಥರು ಮತ್ತು ಹಿಂದು ಮುಖಂಡರು ಪೋಲಿಸರಿಗೆ ಆಗ್ರಹಿಸಿದರು.
ಸೋಮವಾರದಂದು ಬೆಳಿಗ್ಗೆ 9 ಗಂಟೆಗೆ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಬಹುದಾದ ಸಮಸ್ಯೆಗೆ ರಾತ್ರೋರಾತ್ರಿ ಕಂಬ ಕಿತ್ತಿರುವ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಹಾಗೂ ಗ್ರಾಮಸ್ಥರಿಗೆ ಬೆಳಿಗ್ಗೆ 9 ಗಂಟೆಗೆ ಬರಲು ಹೇಳಿ ಖುದ್ದು ತಾವೇ ಬರದಿರುವುದು ಸಹ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಅಂತ್ಯದಲ್ಲಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ತಿಪ್ಪೇಸ್ವಾಮಿ ಹಿಂದು ಕಾರ್ಯಕರ್ತರು ಹಾಗೂ ಸ್ಥಳೀಯರನ್ನು ಸಮಾಧಾನಪಡಿಸಿದ್ದು ಮಂಗಳವಾರದಂದು ಎರಡು ಸಮುದಾಯದ ಮುಖಂಡರನ್ನು ಕರೆಯಿಸಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಅಲ್ಲಿಯ ತನಕ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕೆಂದು ಹಿಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು.
ಡಿವೈಎಸ್ಪಿ ಶ್ರೀಕಾಂತ ಕೆ., ನಗರ ಠಾಣೆ ಸಿಪಿಐ ಗೋಪಿಕ್ರಷ್ಣ, ಗ್ರಾಮೀಣ ಠಾಣೆ ಸಿಪಿಐ ಚಂದನ್ ಗೋಪಾಲ, ಪಿಎಸ್ಐ ಮಯೂರ ಪಟ್ಟಣ ಶೆಟ್ಟಿ, ಮಂಕಿ ಠಾಣೆ ಸಿಪಿಐ ಸಂತೋಷ ಕಾಯ್ಕಿಣಿ, ಮುರುಡೇಶ್ವರ ಹಾಗೂ ಮಂಕಿ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಬಂದೋಬಸ್ತ್‌ನಲ್ಲಿದ್ದರು.
ಈ ಸಂದರ್ಭದಲ್ಲಿ ಜಾಲಿ ಪಟ್ಟಣ ಪಂಚಾಯತ ಸದಸ್ಯ ದಯಾ ನಾಯ್ಕ, ಹಿಂದು ಕಾರ್ಯಕರ್ತರಾದ ಕ್ರಷ್ಣ ನಾಯ್ಕ ಆಸರಕೇರಿ, ರಾಘವೇಂದ್ರ ನಾಯ್ಕ, ಶ್ರೀಕಾಂತ ನಾಯ್ಕ, ಶ್ರೀನಿವಾಸ ನಾಯ್ಕ, ನಾಗೇಶ ನಾಯ್ಕ ಸೇರಿದಂತೆ ನೂರಾರು ಗ್ರಾಮದ ಯುವಕರು ಇದ್ದರು.
ಘಟನೆಯ ಹಿನ್ನೆಲೆ :
ಹಲವು ವರ್ಷಗಳು ಕಳೆದಿದ್ದರಿಂದ ಅದರ ಬಣ್ಣ ಮಾಸಿತ್ತು. ಸ್ಥಳೀಯ ಯುವಕರು ನೂತನವಾಗಿ ಬಣ್ಣಬಳೆದು ಹೆಸರು ಬರೆಯಿಸಲು ಮುಂದಾಗಿದ್ದರು. ಇದನ್ನು ಕಂಡ ಇನ್ನೊಂದು ಕೋಮಿನ ಯುವಕರು ನಾಮಫಲಕ ಬರೆಯಲು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಅನಾದಿಕಾಲದಿಂದಲೂ ಇದ್ದ ಫಲಕ. ಇದನ್ನು ನಾವು ಹೊಸತಾಗಿ ಬಣ್ಣ ಬಳಿದಿದ್ದೇವೆ. ನಾವು ಬೋರ್ಡ ಬರೆಸಿಯೆ ಸಿದ್ದ ಎಂದು ಇನ್ನೊಂದು ಯುವಕರ ಪಂಗಡ ವಾಗ್ವಾದ ನಡೆಸಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತೆರಳಿತ್ತು.
ಎರಡು ಗುಂಪುಗಳ ವಿವಾದವನ್ನು ಆಲಿಸಿದ್ದು, ಬಣ್ಣ ಬಳಿಯಲು ನಾವು ವಿರೋಧಿಸಿಲ್ಲ. ಅದರೊಂದಿಗೆ ಅವರು ಇನ್ನೊಂದು ನಾಮಫಲಕ ಅಳವಡಿಸಲು ಕಂಬವನ್ನು ಹಾಕಿದ್ದು ಅದಕ್ಕೆ ನಮ್ಮ ವಿರೋಧವಿದೆ ಎಂದು ಆಕ್ಷೇಪಿದ್ದಾರೆ.
ಎಎಸ್‌ಐ ರಾಜೇಶ ನಾಯ್ಕ ಮದ್ಯಸ್ಥಿಕೆ ವಹಿಸಿ ಹಿಂದೆ ಇದ್ದ ಫಲಕವನ್ನು ಅಳವಡಿಸಿ, ಹೊಸದನ್ನು ನಿರ್ಮಿಸುವಾಗ ಪಟ್ಟಣ ಪಂಚಾಯತಿ ಪರವಾನಿಗೆ ಪಡೆದು ನಿರ್ಮಿಸುವಂತೆ ಸೂಚಿಸಿದ್ದಾರೆ. ಹೊಸ ನಾಮಫಲಕ ಅಳವಡಿಕೆ ವಿಚಾರ ಪಟ್ಟಣ ಪಮಚಯಿತಿ ಮೆಟ್ಟಿಲೇರಿದ್ದು ಹಳೆಯ ನಾಮಫಲಕ ಬಣ್ಣ ಬಳಿಯುವ ಕಾರ್ಯ ಪೊಲೀಸ್ ಬಂದೊಬಸ್ತನಲ್ಲಿ ಸಂಪೂರ್ಣಗೊಂಡಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸ್ಥಳದಲ್ಲಿ ಸಿಆರ್‌ಪಿಎಫ್ ತುಕಡಿಯನ್ನು ನಿಯೋಜನೆ ಗೊಳಿಸಲಾಗಿತ್ತು.