ಶಿರಸಿ : ಕಲಿಕೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೆ ನಿರಂತರವಾಗಿದ್ದು, ಯಾವುದೇ ವಿಷಯವಾದರೂ ಅಧ್ಯಯನ ಮಾಡಿದಷ್ಟು ಹೊಸ ಹೊಸ ವಿಷಯ, ಅನುಭವಗಳು ಆಗುತ್ತಿರುತ್ತದೆ. ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿ ನಿರ್ಲಕ್ಷ್ಯ ಮಾಡದೇ ಹಿರಿಯರ ಅನುಭವಗಳೊಂದಿಗೆ ಮಾರ್ಗದರ್ಶಿತರಾದರೆ ಜೀವನದ ತೃಪ್ತಿ ಭಾವನೆ ಹೊಂದಲು ಸಾದ್ಯವಾಗುತ್ತದೆ ಎಂದು ಖ್ಯಾತ ಗಾಯಕ ಪಂಡಿತ್ ಡಾ. ಶ್ರೀಪಾದ ಹೆಗಡೆ ಕಂಪ್ಲಿ ಧಾರವಾಡ ಹೇಳಿದರು.
ಇಲ್ಲಿಯ ಲಯನ್ಸ್ ಸಭಾಭವನದಲ್ಲಿ ಸ್ಥಳೀಯ ಆರೋಹಿ ಶೈಕ್ಷಣಿಕ ಹಾಗೂ ಸಾಂಸ್ಕೃತಿ ಕೆಂದ್ರದ ದ್ವೈವಾರ್ಷಿಕ ಸಂಗೀತ ಸಮಾರೋಹದ ಸಮಾರೋಪ ಸಮಾರಂಭದಲ್ಲಿ “ಆರೋಹಿ ಸಾಧಕ ಪ್ರಶಸ್ತಿ” ಪ್ರಧಾನ ಮಾಡಿ ಏರ್ಪಡಿಸಿದ್ದ ರಾಜ್ಯಮಟ್ಟದ ಖ್ಯಾಲ್ ಗಾಯನ ಸ್ಪರ್ಧೆಯ ವಿಜೇತ ಅಭ್ಯರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು. ಎಲ್ಲ ಕಲಾ ಪ್ರಕಾರಗಳಿಗೆ ಮೂಲವಾಗಿರುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಬಹಳ ಆಳವಾಗಿದ್ದು ಅದರ ಆಳವನ್ನು ಪೂರ್ತಿ ಅಭ್ಯಸಿಸಲು ಇನ್ನೂ ಯಾರಿಂದಲೂ ಸಾಧ್ಯವಾಗಿಲ್ಲ. ಸಾಧನೆಯ ಗುರಿ ಹೊಂದಿದವರಿಗೆ ಇದೊಂದು ಒಳ್ಳೆಯ ಸಾಧನವಾಗಿದ್ದು ಜೀವನದ ಆರೊಗ್ಯ ಮಾನಸಿಕ ನೆಮ್ಮದಿ ದೈನಂದಿನ ಜಂಜಾಟಗಳನ್ನೆಲ್ಲವನ್ನು ಹೋಗಲಾಡಿಸುವ ಅದ್ಬುತವಾದ ಶಕ್ತಿ ಸಂಗೀತಕ್ಕಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಧಾರವಾಡ ಹಾಲು ಒಕ್ಕೂಟ ಮತ್ತು ಶಿರಸಿ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ ವ್ಯಕ್ತಿಗತವಾಗಿ ಏಕಾಗ್ರತೆಯನ್ನು ಉಂಟುಮಾಡುವ ಸಂಗಿತ ಕ್ಷೇತ್ರ ಭಕ್ತಿ ಮತ್ತು ಸದಾಚಾರ ಭಾವನೆಗಳನ್ನು ನಮ್ಮಲ್ಲಿ ಮೂಡಿಸುತ್ತದೆ. ಬಾಲ್ಯದಿಂದಲೇ ಮಕ್ಕಳನ್ನು ಸಂಸ್ಕಾರಯುತವಾದ ಸಂಗೀತಾಭ್ಯಾಸದಲ್ಲಿ ತೊಡಗಿಕೊಳ್ಳುವಂತೆ ಮಾಡುವ ಮಹತ್ತರವಾದ ಜವಾಬ್ದಾರಿ ಶಿಕ್ಷಕ ಹಾಗೂ ಪಾಲಕರ ಮೇಲಿದೆ ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಾಯಕ ಹಾಗೂ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಹರೀಶ ಹೆಗಡೆ ಸಂಗೀತಾಭ್ಯಾಸ ಮಾಡುವಾಗ ವಹಿಸಬೇಕಾದ ಎಚ್ಚರಿಕೆಗಳ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ಜೀವಮಾನದ ಸಾಧನೆಗಾಗಿ ಶಿರಸಿ ಲಯನ್ಸ ಶಾಲೆಯ ಶಿಕ್ಷಕಕಿ ಶ್ರೀಮತಿ ರೂಪಾಲಕ್ಷ್ಮಿ(ಕುಂದಾ ಮೇಡಂ) ರವರಿಗೆ ದಂಪತಿ ಸಮೇತ ಪ್ರಸ್ತುತ ವರ್ಷದ “ಆರೋಹಿ ಸಾಧಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಸಂಗೀತ ಸಮಾರೋಹದ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ “ಖ್ಯಾಲ್” ಗಾಯನ ಸ್ಪರ್ಧೆಯಲ್ಲಿ ಒಟ್ಟೂ ನೂರಾ ಏಳು ಸ್ಪರ್ಧಿಗಳು ರಾಜ್ಯದ ವಿವಿಧ ಭಾಗದಿಂದ ಭಾಗವಹಿಸಿದ್ದು, ಅದರಲ್ಲಿ ಅಂತಿಮವಾಗಿ ಐದು ಸ್ಪರ್ಧಾಳುಗಳನ್ನು ಆಯ್ಕೆ ಮಾಡಲಾಗಿತ್ತು. ಆ ಐದು ಗಾಯಕರಿಂದ ಗಾಯನ ಸ್ಪರ್ಧೆ ನಡೆಸಿ ಅದರಲ್ಲಿ ಪ್ರಥಮ ಸ್ಥಾನ ಹಾಗೂ ನಗದು ಬಹುಮಾನವನ್ನು ದರ್ಶನ್ ಮೆಳವಂಕಿ ಪಡೆದರು. ದ್ವಿತೀಯ ಸ್ಥಾನವನ್ನು ವಿಶಾಲ ಕಟ್ಟಿ ಪಡೆದರೆ, ತೃತಿಯ ಸ್ಥಾನವನ್ನು ಶೃತಿ ಕುಲಕರ್ಣಿ, ಚತುರ್ಥ ಸ್ಥಾನವನ್ನು ವಿನೀತ ರಾಣಾಪುರ ಮತ್ತು ಪಂಚಮ ಸ್ಥಾನವನ್ನು ಪೂಜಾ ಹೆಗಡೆ ತಮ್ಮದಾಗಿಸಿಕೊಂಡರು.
ಸಮಾರೋಪ ಸಮಾರಂಭದ ಪೂರ್ವದಲ್ಲಿ ಏರ್ಪಡಿಸಲಾಗಿದ್ದ ಶಾಸ್ತ್ರೀಯ ಗಾಯನ ಕಾರ್ಯಕ್ರಮದಲ್ಲಿ ಆರೋಹಿ ಸಂಗೀತ ಶಾಲೆಯ ಪ್ರಾಚಾರ್ಯೆ ದೀಪಾ ಶಶಾಂಕ ಹೆಗಡೆ ತಮ್ಮ ಗಾಯನ ಪ್ರಸ್ತುತಗೊಳಿಸಿ ರಾಗ ಮಾರುಬಿಹಾಗನ್ನು ವಿಸ್ತಾರವಾಗಿ ಹಾಡಿದರು. ನಂತರ ಗುರು ರಾಘವೇಂದ್ರರ ಕುರಿತಾದ ಭಕ್ತಿ ಪ್ರಧಾನವಾದ ಹಾಡನ್ನು ಹಾಡಿದರು. ಗಾಯನಕ್ಕೆ ಹಾರ‍್ಮೋನಿಯಂನಲ್ಲಿ ವಿಘ್ನೇಶ ಭಾಗ್ವತ್ ತಬಲಾದಲ್ಲಿ ನಾಗೇಂದ್ರ ವೈದ್ಯ ಹಿನ್ನೆಲೆಯ ತಂಬೂರಾದಲ್ಲಿ ದೀಪ್ತಿ ಭಟ್ ಸಾಥ್ ನೀಡಿದರು. ಆಮಂತ್ರಿತ ಕಲಾವಿದ ಹಾಗೂ ಖ್ಯಾಲ್ ಗಾಯನ ಸ್ಪರ್ಧೆಯ ನಿರ್ಣಾಯಕರೂ ಆಗಿದ್ದ ಖ್ಯಾತ ಗಾಯಕ ಪಂ. ಡಾ. ಶ್ರೀಪಾದ ಹೆಗಡೆ ಕಂಪ್ಲಿ ಧಾರವಾಡ, ತಮ್ಮ ಸಂಗೀತ ಕಚೇರಿ ನಡೆಸಿಕೊಟ್ಟು ಆರಂಭಿಕವಾಗಿ ರಾಗ ಭೂಪ್‌ನಲ್ಲಿ ಒಂದು ತಾಸಿಗೂ ಮಿಕ್ಕಿ ಸುಶ್ರಾವ್ಯವಾಗಿ ಹಾಡಿದರು. ನಂತರದಲ್ಲಿ ವಿಠ್ಠಲ ನಾಮ ಭಜನೆ, ಪ್ರಸ್ತುತ ಅಯೋಧ್ಯಾ ರಾಮನ ಕುರಿತಾಗಿ ಭಕ್ತಿ ಗೀತೆಯನ್ನು ಹಾಡುತ್ತಾ ಇಡೀ ಸಭೆಯನ್ನು ಮಂತ್ರಮುಗ್ಧಗೊಳಿಸಿದರು. ಕೊನೆಯಲ್ಲಿ ರಾಗ ಭೈರವಿಯೊಂದಿಗೆ ತರಾನಾ ಪ್ರಸ್ತುತಗೊಳಿಸಿ ಕಾರ್ಯಕ್ರಮ ಸಮಾಪ್ತಿಗೊಳಿಸಿದಾಗ ಇಡೀ ಸಭೆ ಎದ್ದು ನಿಂತು ಕರತಾಡನಗೈದಿದ್ದು ವಿಶೇಷವಾಗಿತ್ತು.ಪಂ.ಕಂಪ್ಲಿ ಗಾಯನಕ್ಕೆ ತಬಲಾದಲ್ಲಿ ಗಣೆಶ ಗುಂಡ್ಕಲ್ ಹಾರ್ಮೋನಿಯಂನಲ್ಲಿ ಭರತ್ ಹೆಬ್ಬಲಸು ತಾನ್‌ಪುರಾದಲ್ಲಿ ದೀಪಾ ಹೆಗಡೆ, ವಿನೀತ್, ದೀಪ್ತಿ ಹಾಗೂ ಸಹಗಾಯನದಲ್ಲಿ ಡಾ. ಹರೀಶ ಹೆಗಡೆ ಸಮರ್ಥವಾಗಿ ಸಾತ್ ನೀಡಿದರು.
ಆರೋಹಿ ಶೈಕ್ಷಣಿಕ ಕೇಂದ್ರ ಅಧ್ಯಕ್ಷ ಶಶಾಂಕ ಹೆಗಡೆ ಎಲ್ಲರನ್ನು ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿ ವಂದಿಸಿದರು. ಇಡೀ ದಿನದ ವಿದ್ಯಾರ್ಥಿಗಳ ಗಾಯನ ಕಾರ್ಯಕ್ರಮದಲ್ಲಿ ಶಿವರಾಮ ಹೆಗಡೆ ತಬಲಾ ಸಾತ್ ನೀಡಿದರೆ, ಶ್ರೀಮತಿ ರೂಪಾ ಹೆಗಡೆ ನಿರ್ವಹಿಸಿದರು.