ಶಿರಸಿ: ಅಭಿವೃದ್ಧಿ ಕಲ್ಪನೆಗಳನ್ನು ಸರಕಾರದ ಕಾಮಗಾರಿಗಳಿಗೆ ಸೀಮಿತಗೊಳಿಸಿದರೆ ನಮ್ಮ ಯೋಚನೆ, ಕಲ್ಪನೆಗಳನ್ನು ಸೀಮಿತಗೊಳಿಸಿದಂತೆ. ಕಾಮಗಾರಿಗಳು ಒಂದೇ ಅಭಿವೃದ್ದಿಯಲ್ಲ. ಸಾಂಸ್ಕೃತಿಕ, ಪರಿಸರ, ಆರ್ಥಿಕ, ಸಾಮಾಜಿಕ ಅಭಿವೃದ್ದಿ ಜೊತೆಗೆ ಕಾಮಗಾರಿಗಳ ಅಭಿವೃದ್ಧಿ ಆಗಬೇಕು. ಅದೇ ಸಮಗ್ರ ಅಭಿವೃದ್ದಿ ಎಂದು ಸಂಸದ ಅನಂತಕುಮಾರ ಹೇಳಿದರು. ಅವರು ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಆಮಂತ್ರಣ ಪತ್ರಿಕೆ ಹಾಗೂ ಗೌರವ ಸಮ್ಮಾನ ಸ್ವೀಕರಿಸಿ, ಮಾತನಾಡಿದರು. ಅಭಿವೃದ್ದಿ ವ್ಯಾಖ್ಯಾನ ದೊಡ್ಡದು. ಕಾಮಗಾರಿಗಳಿಗೆ ಮಾತ್ರ ಅಭಿವೃದ್ದಿ ಸಂಗತಿಯನ್ನು ಸೀಮೀತಗೊಳಿಸಲಾಗದು.
ಸಮಗ್ರ ಅಭಿವೃದ್ದಿಯ ಎಲ್ಲ ನಿಟ್ಟಿನಲ್ಲೂ ನಮ್ಮ ದೇಶದ ಅಭಿವೃದ್ದಿ ದಿಕ್ಕಿನಲ್ಲಿದೆ. ಸೇವೆಯಿಂದ ಉದ್ದಿಮೆ, ವೃತ್ತಿಪರತೆ ಆಲೋಚಿಸಿದರೆ ಅಭಿವೃದ್ಧಿ ಕಾಣುತ್ತದೆ. ಆಗ ಮಾತ್ರ ಧನಾತ್ಮಕ ಬೆಳವಣಿಗೆ ಸಾಧ್ಯ ಎಂದ ಅನಂತ್, ಎಷ್ಟೋ ಬಾರಿ ತಂದಿರುವ ಹಣ, ಕಾಮಗಾರಿ ಖರ್ಚು, ಉದ್ಘಾಟನೆಗೆ ಸೀಮಿತವಾಗುತ್ತದೆ. ಅಭಿವೃದ್ದಿ ವ್ಯಾಖ್ಯಾನ ಊರಿಂದ ಊರಿಗೆ ಬದಲಾಗುತ್ತದೆ. ಬದುಕಿನಲ್ಲಿ ಕೇವಲ ಹಣವೊಂದೇ ವ್ಯಕ್ತಿತ್ವ ರೂಪಿಸುವುದಿಲ್ಲ ಎಂದು ಹೇಳಿದರು.
ಉತ್ತರ ಕನ್ನಡದ ಹೊನ್ನಾವರ ಬಂದರಿನ ಸಮಗ್ರ ಅಭಿವೃದ್ದಿ ಆದರೆ ಈಗಿನ ರಾಷ್ಟ್ರಿಯ ಹೆದ್ದಾರಿ ಸಾಕಾಗುವುದಿಲ್ಲ. ಆಗ ರೈಲ್ವೆ ಕೂಡ ಲಾಭದಾಯಕ ಆಗುತ್ತದೆ ಎಂದ ಅವರು ಕಳೆದ ದಶಕಗಳಲ್ಲಿ ಉತ್ತರ ಕನ್ನಡದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ಹರಡಿಕೊಂಡಿದೆ. ಅಭಿವೃದ್ದಿ ಕೂಡ ಆಗುತ್ತಿದೆ. ಸಾಗರ ಮಾಲಾ ಯೋಜನೆಗಳೂ ಅನುಷ್ಠಾನ ಇದೆ. ಹಾವೇರಿ ಶಿರಸಿ ರಸ್ತೆ ಸರ್ವೆ ಆಗುತ್ತಿದೆ. ಕೆಲವು ಸರ್ವೆ ನಂಬರ್ ಕಾಣದೇ, ವಾರಸುದಾರರು ಪರಿಹಾರಕ್ಕೆ ಅಫಿಡವಿಟ್ ಅರ್ಜಿಯೂ ಹಾಕದೇ ವಿಳಂಬ ಆಗಿರಬಹುದು. ಆ ಭೂಮಿಯನ್ನು ಸರಕಾರ ವಶಕ್ಕೆ ಪಡೆಯಲು ಸಮಯ ಬೇಕಾಗಬಹುದು ಎಂದರು. ಕರ್ನಾಟಕದಲ್ಲೇ ಅತಿ ಹೆಚ್ಚು ಪಿಎಂಜಿಎಸ್‌ವೈ ರಸ್ತೆ ಜಿಲ್ಲೆಯಲ್ಲಿ ಆಗಿದೆ. ಜಿಲ್ಲೆಯ ಮುಖ್ಯ ರಸ್ತೆಗೆ ಜೋಡಣೆ ಮಾಡುವದೇ ಈ ಯೋಜನೆಯ ಆಶಯ ಎಂದ ಅವರು, ಎಲ್ಲ ಜನ ಪ್ರತಿನಿಧಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವ ಮಾನಸಿಕತೆ ಸಾಮಾನ್ಯವಾಗಿದೆ. ಅಭಿವೃದ್ದಿಗೆ ನೀವೇನು ಮಾಡಿದಿರಿ? ಎಂದು ಕೇಳುವವರು ಇದ್ದಾರೆ. ವಾಪಸ್ ಅವರ ಬಳಿ ಅಭಿವೃದ್ದಿ ಎಂದರೇನು ಎಂದು ಕೇಳಿದರೆ ಉತ್ತರ ಇಲ್ಲ ಎಂದರು.ಬಿಎಸ್‌ಎನ್‌ಎಲ್ ಇಂದಿಗೂ ಭಾರತ ಸರಕಾರ ಉಳಿಸಿಕೊಂಡಿದೆ. ಈಗ ಲಾಭದಾಯಕವಾಗುತ್ತಿದೆ. ದೇಶದಲ್ಲಿ ಒಂದು ಜಿಲ್ಲೆಯಲ್ಲಿ ಜನ ಸಂಖ್ಯೆ ಕಡಿಮೆ ಇದ್ದರೂ 725ಕ್ಕೂ ಅಧಿಕ ಟವರ್ ಇರುವರು ಬೇರೆಲ್ಲೂ ಇಲ್ಲ. ಶೇ.60ಕ್ಕೂ ಅಧಿಕ ಪ್ರದೇಶದಲ್ಲಿ ಜನರೇ ಇಲ್ಲದಿದ್ದರೂ ಟವರ್ ಸಂಪರ್ಕ ಇಲ್ಲಿದೆ ಎಂದರು.ನ್ಯಾನ್ಯೋ ಟೆಕ್ನಾಲಜಿ ಜಗತ್ತಿಗೆ ಅದ್ಭುತವಾದ ಕೊಡುಗೆ ನೀಡುತ್ತಿದೆ. ಆಯುರ್ವೇದಿಯ ಔಷಧಗಳಲ್ಲಿ ನ್ಯಾನ್ಯೋ ಬಳಸುವ ಗ್ರೀನ್ ನ್ಯಾನೋ ಬಳಸುತ್ತಿದ್ದೇವೆ. ನಮ್ಮ ಕದಂಬ ಗ್ರೀನ್ ನ್ಯಾನೋ ಕಲಿಯಲು ಜಗತ್ತಿನ ಬೇರಡೆಯ ಸೂಪರ್ ವಿಜ್ಞಾನಿಗಳು ಬರುತ್ತಾರೆ ಎಂದು ವಿವರಿಸಿದರು.
ಜಿಲ್ಲಾ ಪತ್ರಿಕಾ ಸಂಘದ ಅಧ್ಯಕ್ಷ ಜಿ.ಸುಬ್ರಾಯ ಭಟ್ಟ ಬಕ್ಕಳ ಮಾತನಾಡಿದರು. ಸುಮಂಗಲಾ ಹೊನ್ನೆಕೊಪ್ಪ ನಿರ್ವಹಿಸಿದರು. ರಾಜ್ಯ ಸಂಘದ ಸದಸ್ಯ ಬಸವರಾಜ ಪಾಟೀಲ, ತಾಲೂಕು ಸಂಘದ ಅಧ್ಯಕ್ಷ ಸಂದೇಶ ಭಟ್ಟ ಇತರರು ಇದ್ದರು.
ರಾಜಕೀಯದಲ್ಲಿ ತೃಪ್ತಿ ಎಂಬುದಿಲ್ಲ. ಬಹುತೇಕರು ಹಣ, ಅಧಿಕಾರಕ್ಕಾಗಿ ಬರುತ್ತಾರೆ. ಸಮಗ್ರ ಚಿಂತನೆ, ಜ್ಞಾನದ ದಾಹ ಇಂಗಿಸುವಿಕೆ, ಪಾಲಿಸಿ ಯಾವುದರ ಅರ್ಥವೇ ತಿಳಿದಿರುವುದಿಲ್ಲ.
ಅನಂತಕುಮಾರ ಹೆಗಡೆ, ಸಂಸದ