ಕಾರವಾರ: ಸಂಸದ ಅನಂತಕುಮಾರ ಹೆಗಡೆ ನಮ್ಮ ಪಕ್ಷವನ್ನು, ನಾಯಕನ್ನು ಅವಹೇಳನ ಮಾಡುತ್ತಿದ್ದಾರೆ. ದಶಕದಿಂದ ಲೋಕಸಭೆಯಲ್ಲಿ ಪ್ರತಿನಿಧಿ ಕೊಡುಗೆ ಶೂನ್ಯ, ಆದರೂ ಜನರು ಸಹಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ.ಶಂಭು ಶೆಟ್ಟಿ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಸಂಸದರ ಸುಳಿವು ಇರಲಿಲ್ಲ. ಚತುಷ್ಪಥ ಅರೆಬರೆ ಕಾಮಗಾರಿಯಿಂದ ಹಲವಾರು ಮೃತರಾದರೂ ಸ್ಪಂದಿಸಿಲ್ಲ. ಪ್ರಧಾನಿ ಬಂದರೂ ಸ್ವಾಗತಿಸಲು ಬಂದಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕಂಡಿಲ್ಲ.15 ದಿನಗಳಿಂದ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇಂದಿರಾ ಕುಟುಂಬಕ್ಕೆ ಯಾವುದೊ ಶಾಪವಿದೆ. ಗೋಕುಲಾಷ್ಟಮಿ ದಿನವೇ ಸಂಜಯ ಗಾಂಧಿ ವಿಮಾನ ಅಪಘಾತ, ಇಂದಿರಾ ಗಾಂಧಿ ಗುಂಡಿಗೆ ಬಲಿ ಎಂದಿದ್ದಾರೆ. ರಾಜೀವ ಗಾಂಧಿ ಹೇಳುವ ಬದಲು ರಾಹುಲ್‌ರೆಂದು ಹೇಳಿದ್ದಾರೆ. ತಪ್ಪಾಗಿ ಹೇಳಿದರೂ ಕ್ಷಮೆ ಕೇಳುವ ಸೌಜನ್ಯವೂ ಇಲ್ಲ. ಸಿದ್ದರಾಮಯ್ಯ ಅವರನ್ನ ಕನಿಷ್ಠ ಭಾಷೆಯಿಂದ ನಿಂದನೆ ಮಾಡಿದ್ದಾರೆ. ಪದವಿಗೂ ಅಗೌರವ ಕೊಟ್ಟಿರುವಂತೆ ವರ್ತನೆ ಮಾಡಿದ್ದಾರೆ ಎಂದು ಆಕ್ರೊಶ ಹೊರಹಾಕಿದರು.
ಹೊನ್ನಾವರದ ಪರೇಶ್ ಮೇಸ್ತಾ ಮೃತಪಟ್ಟಡಾಗ ಹನಿ ಹನಿ ರಕ್ತಕ್ಕೂ ನ್ಯಾಯ ಕೊಡಿಸುತ್ತೇವೆ ಎಂದು ಇದೇ ಅನಂತಕುಮಾರ ಹೇಳಿದ್ದರು. ರಕ್ತಕ್ಕೂ, ಕುಟುಂಬಕ್ಕೂ ನ್ಯಾಯ ಸಿಕ್ಕಿಲ್ಲ. ಸಿಬಿಐ ಈ ಪ್ರಕರಣದಲ್ಲಿ ಬಿ ವರದಿ ಸಲ್ಲಿಸಿದೆ. ಚುನಾವಣೆಗೆ ಅಷ್ಟೇ ಸಿಮೀತವಾಯಿತೇ?
ಯಾರನ್ನು ಅವರು ದ್ವೇಷ ಮಾಡುತ್ತೀರೊ ಅವರೊಂದಿಗೆ ವ್ಯವಹಾರವಿದೆ. ಕೋಮುಪ್ರಚೋದನೆ ಮಾಡಿ ಬಡವರ ಮಕ್ಕಳು ಸಂಕಷ್ಟಕ್ಕೆ ಒಳಗಾಗುತ್ತಾರೆ. ಇಂಥವರ ಮೇಲೆ ಕಾನೂನು ಕ್ರಮ ಆಗಬೇಕು. ಇದೆಲ್ಲಾ ಚುನಾವಣೆಯ ಹಿಡನ್ ಅಜೆಂಡಾ ಎಂದು ಜನರಿಗೆ ತಿಳಿಯುತ್ತದೆ. ದಶಕದಿಂದ ಉತ್ತರ ಕನ್ನಡದ ಪ್ರತಿನಿಧಿಯಾಗಿ ಲೋಕಸಭೆಯಲ್ಲಿದ್ದೀರಿ. ಅವರ ಕೊಡುಗೆ ಶೂನ್ಯವಾಗಿದೆ. ಆದರೂ ಜನರು ಸಹಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.