ಯಲ್ಲಾಪುರ: ತಾಲೂಕಿನ ತೋಳಗೋಡ-ಹರಿಗದ್ದೆ -ಹಿತ್ಲಳ್ಳಿ ಸಂಪರ್ಕಿಸುವ ಹದಗೆಟ್ಟ ರಸ್ತೆ ದುರಸ್ತಿ ಕುರಿತು ಜನ ಪ್ರತಿಭಟನೆಗೆ ನಿರ್ಧರಿಸಿದ್ದನ್ನು ಗುತ್ತಿಗೆದಾರರು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕೈಬಿಡಲಾಗಿದೆ.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿ.ಎಂ. ಭಟ್ ಮತ್ತು ಗುತ್ತಿಗೆದಾರ ಬಿ.ಎಸ್. ಗಾಂವ್ಕರ್ ನಾಗರಿಕರೊಡನೆ ಸಮಾಲೋಚನೆ ನಡೆಸಿದರು. ಗುತ್ತಿಗೆದಾರರು ಕೆಲಸ ನಡೆಸಲು ತಮಗೆ ಎದುರಾದ ಸಮಸ್ಯೆಗಳನ್ನು ಸ್ಥೂಲವಾಗಿ ವಿವರಿಸಿದರು. ವಿ.ಎಂ.ಭಟ್ ಮೇಲಾಧಿಕಾರಿಗಳಿಗೆ ಮನವಿ ಮಾಡಿ ಕಾಮಗಾರಿಗೆ ಸಮಯಾವಕಾಶದ ಗಡುವು ವಿಸ್ತರಣೆ ಮಾಡಿದ ಬಗ್ಗೆ ಲಿಖಿತ ರೂಪದಲ್ಲಿ ಸೂಚನೆ ನೀಡಿದಲ್ಲಿ, ಜ.15 ರ ನಂತರ ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸುತ್ತೇನೆ ಎಂದು ಆಶ್ವಾಸನೆ ನೀಡಿದರು. ಕಾರಣಾಂತರಗಳಿಂದ ಸ್ಥಗಿತವಾಗಿದ್ದ ಸದರಿ ರಸ್ತೆಯ ಕಾಮಗಾರಿ ಅತಿ ಶೀಘ್ರವಾಗಿ ಪ್ರಾರಂಭವಾಗುವ ಧನಾತ್ಮಕ ಪ್ರತಿಕ್ರಿಯೆ ದೊರಕುವುದರಿಂದ ಈ ಮೊದಲೇ ತೀರ್ಮಾನವಾಗಿದ್ದ ಶಿರಸಿ – ಯಲ್ಲಾಪುರ ರಾಜ್ಯ ಹೆದ್ದಾರಿಯನ್ನು ತಡೆಗಟ್ಟುವ ಉಗ್ರಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡುವುದೆಂದು ಸಭೆಯಲ್ಲಿ ಗ್ರಾಮಸ್ಥರು ತೀರ್ಮಾನ ಕೈಗೊಂಡರು.
ಸಭೆಯಲ್ಲಿ ಹಿತ್ಲಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಸತ್ಯನಾರಾಯಣ ಹೆಗಡೆ, ಹಿತ್ಲಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋವಿಂದ ಜಿ. ಶೆಟ್ಟಿ , ತಾಲೂಕಾ ಚುನಾಯಿತ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಎಂ. ಕೆ. ಭಟ್, ತಾಲೂಕಾ ಗುತ್ತಿಗೆದಾರ ಸಂಘದ ಅಧ್ಯಕ್ಷ ವಿ.ಎಂ.ಹೆಗಡೆ ಜಾಲಿಮನೆ, ತೋಳಗೋಡ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಣ್ಣಪ್ಪ ಪೋಕಳೆ ಪ್ರಮುಖರಾದ ನಾಗೇಂದ್ರ ಪತ್ರೇಕರ, ಮಂಜುನಾಥ ಭೂ. ಶೇಟ್,ಗೋಪಾಲ ಹೆಗಡೆ, ಸುಬ್ರಾಯ ಶೇಟ್ , ಮಹಾಬಲೇಶ್ವರ ಭಟ್,ಪ್ರಶಾಂತ ಶಾಸ್ತ್ರಿ ಸುತ್ತಮುತ್ತಲ ಗ್ರಾಮಸ್ಥರು ಉಪಸ್ಥಿತರಿದ್ದರು.