ದಾಂಡೇಲಿ : ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಹಾಗೂ ಅರಣ್ಯ, ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಂಯುಕ್ತ ಆಶ್ರಯದಡಿ ನಗರದ ಸಿವಿಲ್ ನ್ಯಾಯಾಲಯದ ಸಭಾಭವನದಲ್ಲಿ ವಿಶ್ವ ಯುವ ದಿನಾಚರಣೆ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರೋಹಿಣಿ.ಡಿ.ಬಸಾಪುರ ಅವರು ಉದ್ಘಾಟಿಸಿ ಮಾತನಾಡುತ್ತಾ, ಯುವ ಜನತೆಯನ್ನು ಪ್ರಜ್ಞಾವಂತ ನಾಗರಿಕರನ್ನಾಗಿಸುವ ಮೂಲಕ, ಸದೃಢ ಸಮಾಜ ನಿರ್ಮಾಣದ ಉದ್ದೇಶದಡಿಯಲ್ಲಿ ವಿಶ್ವ ಯುವ ದಿನಾಚರಣೆಯನ್ನು ಆಯೋಜಿಸಲಾಗುತ್ತಿದೆ. ಉತ್ತಮ ವಿಚಾರಧಾರೆಗಳೊಂದಿಗೆ ಮುನ್ನಡೆದಾಗ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಯುವ ಜನತೆ ಜಾಗೃತರಾಗಬೇಕಾಗಿದೆ. ಯುವ ಶಕ್ತಿ ದೇಶದ ಅಮೂಲ್ಯ ಆಸ್ತಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷರಾದ ಎಚ್.ಎಸ್.ಕುಲಕರ್ಣಿ ಅವರು ವಹಿಸಿ ಮಾತನಾಡುತ್ತಾ, ಒಂದು ದೇಶದ ಪ್ರಗತಿ ಯುವ ಜನತೆಯ ಮೇಲೆ ಅವಲಂಬಿತವಾಗಿದೆ. ಉತ್ತಮ ಜೀವನ ನಡವಳಿಕೆಗಳನ್ನು ಮೈಗೂಡಿಸಿಕೊಂಡು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಯುವ ಜನತೆ ಮುಂದಾಗಬೇಕೆಂದು ಕರೆ ನೀಡಿದರು.
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಗೀತಾಕ್ಕ ಅವರು ಯುವ ಜನತೆ ಉನ್ನತ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು, ಇನ್ನೊಬ್ಬರಿಗೆ ಮಾದರಿಯಾಗುವ ಜೀವನ ಕ್ರಮಗಳನ್ನು ಅನುಸರಿಸಿ, ಸಮಾಜಮುಖಿಯಾಗಿ ಬದುಕಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಸರಕಾರಿ ಅಭಿಯೋಜಕರಾದ ಶಿವರಾಯ ದೇಸಾಯಿ, ಹಿರಿಯ ವಕೀಲರಾದ ಸೋಮಕುಮಾರ್.ಎಸ್ ಅವರು ವಿಶ್ವ ಯುವ ದಿನಾಚರಣೆಯ ಉದ್ದೇಶ ಪರಿಕಲ್ಪನೆಯನ್ನು ವಿವರಿಸಿದರು. ನ್ಯಾಯವಾದಿಗಳಾದ ರತ್ನಾದೀಪ.ಎನ್.ಎಂ ಸ್ವಾಗತಿಸಿದರು. ಆಫ್ರಿನ್ ಕಿತ್ತೂರು ವಂದಿಸಿದರು. ರಾಘವೇಂದ್ರ ಗಡೆಪ್ಪನವರ ಕಾರ್ಯಕ್ರಮವನ್ನು ನಿರೂಪಿಸಿದರು.