ಭಟ್ಕಳ: ತಾಲೂಕಿನ ಪುಣ್ಯಕ್ಷೇತ್ರಗಳಲ್ಲೊಂದಾದ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದ ಚರು ಹಾಕುವ ಕಾರ್ಯಕ್ರಮ ಕೆಲವು ಧಾರ್ಮಿಕ ವಿಧಿವಿಧಾನಗಳ ಮೂಲಕ ನಡೆಯಿತು.
ದೇವಸ್ಥಾನದ ರಾತ್ರಿಯ ಪೂಜೆಯ ಬಳಿಕ ಪೂಜಾರಿಯವರ ಮುಖೇನ ದೇವಸ್ಥಾನದಿಂದ ಹೊರಟು ಕುಕ್ಕನೀರ್, ವೆಂಕಟಾಪುರ, ಗಾಂಧಿನಗರ ಹಾಗೂ ತೆಂಗಿನಗುಂಡಿ ಮಾರ್ಗವಾಗಿ ಮತ್ತೆ ಪುನಃ ಶ್ರೀ ಕ್ಷೇತ್ರಕ್ಕೆ ಬಂದು ತಲುಪಲಾಯಿತು. ದಾರಿಯುದ್ದಕ್ಕೂ ಭಕ್ತರು ತಮ್ಮತಮ್ಮ ಮನೆಯ ಎದುರು ದೇವಸ್ಥಾನದ ಮುಖ್ಯ ಪೂಜಾರಿಯವರು ಬಂದ ನಂತರ ಕುಡಿ ಬಾಳೆಲೆ ಇಟ್ಟು ಪಾದಕ್ಕೆ ನೀರು, ಕೊರಳಿಗೆ ತುಳಸಿ ಮಾಲೆಯನ್ನು ಹಾಕಿ ಕೈ ಮುಗಿದು ಸಿಂಗಾರದ ಪ್ರಸಾದವನ್ನು ಸ್ವೀಕರಿಸಿದರು. ಮಾರ್ಗಮಧ್ಯದಲ್ಲಿ ಕೆಲವು ಪ್ರನುಖ ಗಡಿ ದೇವರುಗಳಿಗೆ ಪೂಜೆ ಸಲ್ಲಿಸುತ್ತಾ, ಹೊರಗಿನ ಪರಿವಾರ ಸ್ಥಳಗಳಿಗೆ ಬೇಯಿಸಿದ ಚರುವನ್ನು ಎಸೆಯುತ್ತಾ ಸಾಗಲಾಯಿತು. ಈ ಸಂದರ್ಭದಲ್ಲಿ ಭಕ್ತರಿಂದ ‘ಹೋ..ಹೋ…’ ಎನ್ನುವ ಕೂಗು ಕೇಳಿ ಬಂತು.
ರಾತ್ರಿ ಒಂಭತ್ತು ಗಂಟೆಗೆ ಹೊರಟು, ದೇವಸ್ಥಾನಕ್ಕೆ ಮತ್ತೆ ಪುನಃ ತಲುಪುವ ಸಮಯ ಮಧ್ಯರಾತ್ರಿ ಹನ್ನೆರಡೂವರೆ ಆಗಿತ್ತು. ಈ ವೇಳೆ ಮತ್ತೆ ಶ್ರೀ ದೇವರುಗಳಿಗೆ ಕರ್ಪೂರದಾರತಿ ಬೆಳಗಿ ಜಾತ್ರೆಗೆ ಅಭಯವನ್ನು ಕೇಳಲಾಯಿತು. ಜನವರಿ 15-16 ಎರಡು ದಿನಗಳ ಕಾಲ ಶ್ರೀ ಶೇಡಬರಿ ಜಾತ್ರೆ ನಡೆಯುತ್ತದೆ. ಇದರ ಮೊದಲಿನ ದಿನ ಶೇಡಿಮರ ಏರಿಸಿ, ಅಡಿ ಅಕ್ಕಿ ಒಯ್ಯುವ ಪದ್ಧತಿ ನಡೆಯುತ್ತದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು, ಪೂಜಾರಿ ಕುಟುಂಬದವರು, ಚರುಗೆ ಸಂಬಂಧಿಸಿದ ಕುಟುಂಬದವರು ಹಾಗೂ ಊರಿನ ನೂರಾರು ಭಕ್ತರು ಪಾಲ್ಗೊಂಡಿದ್ದರು.