ಶಿರಸಿ: ವೇದಗಳು ಭಾರತೀಯ ಜ್ಞಾನದ ಭಂಡಾರವಷ್ಟೇ ಅಲ್ಲ, ಪರಂಪರೆಯ ಪ್ರತಿಬಿಂಬವಾಗಿದೆ ಎಂದು ವಿದ್ವಾನ್ ಅನಂತಮೂರ್ತಿ ಭಟ್ಟ ಯಲೂಗಾರ ವಿಶ್ಲೇಷಿಸಿದರು.
ಅವರು ಮಾರಿಕಾಂಬಾ ನಗರದ ಗಾಯತ್ರಿಬಳಗದ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ವೇದಗಳು ಮಾನವಧರ್ಮ ಹಾಗು ಸಂಸ್ಕೃತಿಯ ತವರುಮನೆಯಾಗಿದೆ. ವೇದಗಳ ಅಧ್ಯಯನ ಹಾಗು ಮನನ ಇಂದಿನ ಅಗತ್ಯವಾಗಿದೆ. ಸ್ಮೃತಿ ಗಳು 108 ಹಾಗೂ ರಚನೆಕಾರರು 21 ಎಂದು ಹೇಳಲಾಗುತ್ತಿದೆ. ಇದು ಹೀಗೆಯೇ ಇರಬೇಕೆಂದು ಮಹರ್ಷಿಗಳು ಹೇಳಿದ್ದಾರೆ. ಮನುಷ್ಯ ತನ್ನ ವಿವೇಚನಾ ಶಕ್ತಿಯಿಂದಾಗಿ ಸಮರ್ಥವಾಗಿ ತಿಳಿಯಲು ಹಾಗೂ ಪಾಲಿಸಲು ಅರ್ಹನಾಗಿದ್ದರೂ , ಕೀಚಕ ಮನೋಭಾವವನ್ನು ಹೊಂದಿದ್ದಾನೆ. ಇದರಿಂದಾಗಿ ಪ್ರಕೃತಿ ವಿನಾಶಕ್ಕೆ ಕಾರಣನಾಗಿದ್ದಾನೆ. ಜೀವನದಲ್ಲಿ ಸುನೀತಿ ಹಾಗು ಸುರುಚಿ ಎರಡೂ ಇರಬೇಕು. ಸುರುಚಿ ಕಡಿಮೆಯಾಗಿ ಸುನೀತಿ ಹೆಚ್ಚಾಗಿರಬೇಕು. ನಮ್ಮ ಸಂಸ್ಕೃತಿಯು ಅಪೂರ್ವವಾದುದು. ಅದರ ಸಫಲತೆಯನ್ನು ಅನುಭವಿಸಲು, ನಮ್ಮ ಬದುಕಿನ ಹೆಜ್ಜೆ ಪಾರದರ್ಶಕತೆಯಿಂದ ಕೂಡಿರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.
ನಂತರ, ಉಂಚಳ್ಳಿಯ ಝೇಂಕಾರ ಭಜನಾ ಮಂಡಳಿಯ ಸದಸ್ಯರು ಪ್ರಸ್ತುತಪಡಿಸಿದ ಭಕ್ತಿಗೀತೆ, ಭಾವಗೀತೆ, ಭಜನೆಗಳು ಸುಶ್ರಾವ್ಯವಾಗಿ ಭಕ್ತಿಯ ಮೆರಗಿನಿಂದ ಕೂಡಿತ್ತು. ಡಿ.ಎಮ್.ಭಟ್ಟ ಕುಳುವೆ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು.ಬಳಗದ ಎಮ್.ಎಸ್. ಹೆಗಡೆ ಕಲಾವಿದರಿಗೆ ಗೌರವ ಸಮರ್ಪಣೆ ಮಾಡಿದರು. ಸಂಚಾಲಕ ವಿಶ್ವೇಶ್ವರ ಗಾಯತ್ರಿ ವಂದಿಸಿದರು.