Slide
Slide
Slide
previous arrow
next arrow

ಸಂಪೂರ್ಣ ಹದಗೆಟ್ಟ ಶಿರಸಿ-ಗೋಳಿಮಕ್ಕಿ ರಸ್ತೆ: ಮರುಡಾಂಬರೀಕರಣಕ್ಕೆ ಆಗ್ರಹ

300x250 AD

ಶಿರಸಿ: ಶಿರಸಿಯಿಂದ ಹೇರೂರು, ಗೋಳಿಮಕ್ಕಿ ಹೋಗಬೇಕೆಂದರೆ ವಾಹನ ಸವಾರರು ಹರಸಾಹಸ ಮಾಡಬೇಕಾಗಿದ್ದು, ತಿರುವು ಮುರುವಿನಿಂದ ಕೂಡಿದ ಈ ರಸ್ತೆಯಲ್ಲಿ ಯಾವ ಮಾದರಿಯ ರಸ್ತೆ,ಹೊಂಡ ಇದೆ ಎಂದು ಊಹಿಸುವುದೂ ನಿಮಗೆ ಕಷ್ಟವಾಗುವ ಪರಿಸ್ಥಿತಿಯಿದೆ. ಹೌದು, ಮಳೆಗಾಲ ಕಳೆದ ಮೇಲೆ ಈ ರಸ್ತೆಯ ಹೊಂಡ ತುಂಬುವ ಪ್ರಕ್ರಿಯೆ ಸಹ ನಡೆದಿಲ್ಲ. ಅಲ್ಲಲ್ಲಿ ಉತ್ತಮ ರಸ್ತೆ ನಿರ್ಮಿಸಲಾಗಿದ್ದರೂ ಗಾಡಿ ವೇಗ ಜಾಸ್ತಿ ಮಾಡುತ್ತಿದ್ದಂತೆಯೇ ಮತ್ತೆ ರಸ್ತೆ ಹೊಂಡಗಳು ಎದುರಿಗೆ ರಾರಾಜಿಸುತ್ತವೆ.

 ಶಿರಸಿ ಕುಮಟಾ ರಸ್ತೆಯ ಕೊಳಗಿಬೀಸ್‌ನಿಂದ ಹೇರೂರು ಮತ್ತು ಗೋಳಿಮಕ್ಕಿಗೆ ತೆರಳುವ ಮಾರ್ಗ ಆರಂಭವಾಗುತ್ತದೆ. ಕೊಳಗಿಬೀಸ್‌ನಿಂದ 2.5 ಕಿ ಮೀ.ನ ಹೆಬ್ಬಲಸು ಕ್ರಾಸ್ ವರೆಗೆ ರಸ್ತೆಯ ಸ್ಥಿತಿ ಸಂಪೂರ್ಣ ಹಾಳಾಗಿದ್ದು, ಕಳೆದ ಬೇಸಿಗೆಯಲ್ಲಿ ಇಲ್ಲಿ ಮರು ಡಾಂಬರೀಕರಣಕ್ಕೆ ಯೋಜನೆ ರೂಪಿಸಲಾಗಿತ್ತಾದರೂ ವಿಧಾನಸಭೆಯ ಚುನಾವಣೆಯ ಕಾರಣ ಟೆಂಡರ್ ಪ್ರಕ್ರಿಯೆ ಅಷ್ಟಕ್ಕೇ ನಿಂತಿತ್ತು. ಎಂದೋ ಮಾಡಿದ ರಿ ಕಾರ್ಪೆಟ್ ಸಂಪೂರ್ಣ ಕಿತ್ತೆದ್ದು ಹೋಗಿ ಓಡಾಡುವ ವಾಹನಗಳು ಓಡಾಡದ ಪರಿಸ್ಥಿತಿ ಎದುರಾಗಿದೆ. ಇಲ್ಲಿಯ ಹಣಜಿಮನೆ ಬಳಿ ಸಂಪೂರ್ಣ ಕಿತ್ತೆದ್ದುಹೋಗಿರುವ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಒಂದಕ್ಕೊಂದು ತಾಗಿ ಮಾತಿನ ಚಕಮಕಿಗಳೂ ನಡೆದಿವೆ.

ಇನ್ನು ಹೆಬ್ಬಲಸು ಕ್ರಾಸ್‌ನಿಂದ ಮರ್ಲಮನೆ ಕ್ರಾಸ್‌‌ವರೆಗೆ ಕಳೆದ ವರ್ಷ ರಸ್ತೆ ಅಗಲಗೊಳಿಸಿ ಮರು ಡಾಂಬರೀಕರಣ ಮಾಡಲಾಗಿದೆ. ಇಲ್ಲಿ ಉತ್ತಮ ರಸ್ತೆ ಇರುವ ಕಾರಣ ವಾಹನಗಳು ವೇಗ ಪಡೆದುಕೊಂಡರೂ ಮತ್ತೆ ಮರ್ಲಮನೆ ಕ್ರಾಸ್‌ನಿಂದ ಸರಕುಳಿ ಮಹಿಷಾಸುರ ಮರ್ಧಿನಿ ದೇವಾಲಯದವರೆಗೂ ರಸ್ತೆ ಯಾವುದೋ, ಹೊಂಡ ಯಾವುದೋ ಎಂದು ತಿಳಿಯದ ಸ್ಥಿತಿ ಇದೆ. ಈ ಮಾರ್ಗದಲ್ಲಿ ವಾಹನ ಸಂಖ್ಯೆ ಜಾಸ್ತಿ ಇದ್ದು, ರಾತ್ರಿಯ ವೇಳೆಯಲ್ಲೂ ವಾಹನಗಳು ಚಲಿಸುತ್ತಿರುತ್ತವೆ. ನಿತ್ಯ 300ಕ್ಕೂ ಅಧಿಕ ವಾಹನಗಳ ಸಂಚಾರ ಇಲ್ಲಿದೆ. ಇನ್ನಾದರೂ ಅಗತ್ಯವಿರುವ ಕಡೆಗಳಲ್ಲಿ ಮರು ಡಾಂಬರೀಕರಣ ಮಾಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬ  ಆಗ್ರಹ ಕೇಳಿಬಂದಿದೆ. 

ಮರೆತುಹೋದ ನೇರ್ಲವಳ್ಳಿ ಸೇತುವೆ:

300x250 AD

ಇಲ್ಲಿಯ ನೇರ್ಲವಳ್ಳಿ ಬಸ್ ತಂಗುದಾಣದ ಬಳಿ ಅನಾದಿಕಾಲದಲ್ಲಿ ನಿರ್ಮಿಸಿದ, ಒಂದು ವಾಹನ ಮಾತ್ರ ದಾಟಬಹುದಾದ ಸೇತುವೆ ಇದೆ. ಈ ಸೇತುವೆಯನ್ನು ಪುನರ್‌ನಿರ್ಮಿಸಿ ರಸ್ತೆ ಅಗಲಗೊಳಿಸುವ ಬಗ್ಗೆ ಕಳೆದ ವರ್ಷವೇ ಪ್ರಸ್ತಾವನೆ ಸಲ್ಲಿಸಲಾಗಿತ್ತಾದರೂ ಇದುವರೆಗೂ ಯಾವುದೇ ರೀತಿಯ ಪ್ರಗತಿ ಕಂಡಿಲ್ಲ. 

ಮರ್ಲಮನೆಯಿಂದ ಸರಕುಳಿಯವರೆಗೆ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣ, ಹೆಬ್ಬಲಸು ಕ್ರಾಸ್‌ನಿಂದ ಕೊಳಗಿಬೀಸ್ ವರೆಗೆ ಮರು ಡಾಂಬರೀಕರಣಕ್ಕೆ ಈಗಾಗಲೇ 1.75 ಕೋಟಿ ರೂ. ಹಣ ಬಿಡುಗಡೆ ಆಗಿದೆ. ಸಾಧ್ಯವಾದಷ್ಟು ತ್ವರಿತವಾಗಿ ಕಾಮಗಾರಿ ಆರಂಭಿಸುತ್ತೇವೆ. – ಹನುಮಂತ ನಾಯ್ಕ, ಲೊಕೋ

Share This
300x250 AD
300x250 AD
300x250 AD
Back to top