Slide
Slide
Slide
previous arrow
next arrow

ಕೆಡಿಪಿ‌ ಸಭೆ : ತಾಲ್ಲೂಕಿನ ಪ್ರಗತಿಗೆ ಸ್ಪಂದಿಸಲು ಅಧಿಕಾರಿಗಳಿಗೆ ದೇಶಪಾಂಡೆ ಸೂಚನೆ

300x250 AD

ಜೋಯಿಡಾ : ತಾಲೂಕಿನಲ್ಲಿ ಸಮೃದ್ಧ ಕಾಡು ಇರುವುದರಿಂದ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಪ್ರಕೃತಿ‌ಮಾತೆಯ ಸ್ವಚ್ಚಂದ ವಾತಾವರಣದೊಂದಿಗೆ ಹಾಯಾಗಿ ನಿದ್ದೆಗೆ ಜಾರಿದಂತೆ ಕಾಣುತ್ತದೆ. ಯಾವ ಕೆಲಸ ನೋಡಿದರೂ ಪ್ರಗತಿಯಲ್ಲಿದೆ, ಮಾಡುತ್ತೇವೆ ಎನ್ನುತ್ತಾರೆ, ಮಾಡಿದ ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ ಎಂಬ ಆರೋಪಗಳು ಜನರಿಂದ ಕೇಳಿ ಬರುತ್ತಲೆ‌ ಇದೆ. ಇಲ್ಲಿನ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಜನರ ಕಷ್ಟಕ್ಕೆ ಸ್ಪಂದಿಸುವ ಜವಾಬ್ದಾರಿ ಇಲ್ಲವಾಗಿದೆ. ಕೆಲಸಗಳು ನಡೆದಲ್ಲಿ ನಾಮಫಲಕಗಳನ್ನು ಹಾಕಿ, ಅಧಿಕಾರಿಗಳು ಕುರ್ಚಿ ಬಿಸಿ ಮಾಡಿ ಕೈ ತುಂಬ ಸಂಬಳ‌ ಪಡೆಯುವುದು ಮಾತ್ರವಲ್ಲ‌, ಮೈ ಚಳಿ ಬಿಟ್ಟು ತಾಲೂಕಿನೆಲ್ಲೆಡೆ ತಿರುಗಾಡಿ ಕೆಲಸ ಮಾಡಿ, ಜನರ ಕಷ್ಟಕ್ಕೆ ಸ್ಪಂದಿಸಿ ಅನುಕೂಲ ಮಾಡಿಕೊಡಿ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕರಾದ ಅರ್.ವಿ.ದೇಶಪಾಂಡೆ ಹೇಳಿದರು.

ಅವರು ಜೋಯಿಡಾದ ಸರಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ಸಂಜೆ ನಡೆದ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜೋಯಿಡಾ ತಾಲೂಕಿನಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಾನು ಸರ್ಜರಿ ಮಾಡಿದರೆ ನಿಮ್ಮೆಲ್ಲರ ಆಪರೇಶನ್ ಆಗುತ್ತದೆ. ನಿಮಗೆ ಯಾರ ಭಯವಿಲ್ಲ. ಹೇಗೆ ಕೆಲಸ ಮಾಡಿದರೂ ನಡೆಯುತ್ತದೆ ಎನ್ನುವಂತಾಗಿದೆ. ಸರ್ಕಾರದ ಅನುದಾನ ,ಯೋಜನೆ ಈ ತಾಲೂಕಿನ ಜನರಿಗೆ ಸಿಗುತ್ತಿಲ್ಲ. ಸರ್ಕಾರ ಬಡವರಿಗೆ ನೀಡಿದ ಅನುಕೂಲಗಳು ತಾಲೂಕಿನಲ್ಲಿ ಸಿಗುವ ಹಾಗೆ ಮಾಡಿ, ಇಲ್ಲಿನ ಮುಗ್ದ ಜನರ ಮನಸ್ಸಿನ ಜೊತೆ, ಬದುಕಿನ ಜೊತೆ ಚಲ್ಲಾಟವಾಡಬೇಡಿ. ಅರಣ್ಯ ಇಲಾಖೆಯ ಅಧಿಕಾರಿಗಳು ಜನರಿಗೆ ಸಹಾಯ ಮಾಡಿ ತೊಂದರೆ ಕೊಡಬೇಡಿ. ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಕುಡಿಯುವ ನೀರು ಸರಬರಾಜು ಇಲಾಖೆ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆಯ ಅಧಿಕಾರಿಗಳು ಲಕ್ಷ್ಯ ವಹಿಸಿ ತಾಲೂಕಿನ ಅಭಿವೃದ್ಧಿಯತ್ತ ಗಮನ ಕೊಡಿ‌ ಎಂದು ಸೂಚನೆಯನ್ನು‌ ನೀಡಿದರು. ಕೆಲ ಗ್ರಾಮ ಪಂಚಾಯ್ತುಗಳಲ್ಲಿ ಪಿಡಿಓಗಳನ್ನು ಯಾಮಾರಿಸಿ ಕಾರ್ಯದರ್ಶಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದರ ಬಗ್ಗೆಯೂ ಮಾಹಿತಿ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ನಾನು ಹಿಂದೆ ಮಾಡಿದ ಕುಡಿಯುವ ನೀರಿನ ಯೋಜನೆ ಹಾಳಾಗಿದೆ ಎಂದು ಜನರು ಹೇಳುತ್ತಿದ್ದಾರೆ. ಅದನ್ನು ಸರಿಪಡಿಸಿ, ಕುಡಿಯುವ ನೀರಿನ ಯೋಜನೆ ಮಾಡಬೇಕಾದರೆ ಸ್ಥಳೀಯ ಜನರಿಗೆ ತಿಳಿಸಬೇಕು. ಕನ್ನಡ ಭವನ ಕೆಲಸಕ್ಕೆ ಕೂಡಲೇ ಚಾಲನೆ ನೀಡಬೇಕು. ಗುಂದಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಹಳೇ ಅತಿಕ್ರಮಣ ಇದ್ದಲ್ಲಿ ಅಂತವರಿಗೆ ಅರಣ್ಯ ಇಲಾಖೆ ತೊಂದರೆ ಕೊಟ್ಟರೆ ನಾನು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಸಭೆಗೆ ಬರದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡಿದರು. ಅರಣ್ಯ ಅಧಿಕಾರಿಗಳ ವರ್ತನೆ ಸರಿಯಿಲ್ಲ, ನಿಮ್ಮನ್ನು ನೋಡಿ ನೋಡಿ ನನ್ನ ಕೂದಲು ಹಣ್ಣಾಯಿತು. ಕಾಡಿನಂಚಿನಲ್ಲಿ ಇರುವ ಜನರಿಗೆ ದಯವಿಟ್ಟು ತೊಂದರೆ ಕೊಡಬೇಡಿ. ಒಂದು ತೆಂಗಿನ ಗಿಡ, ಅಡಿಕೆ ಗಿಡ ಬೆಳೆಸಲು ಎಷ್ಟು ಕಷ್ಟವಿದೆ ಎನ್ನುವ ಅರಿವಿರಬೇಕು. ಅಂತಹ ಮರಗಳು ಕತ್ತರಿಸಿದರೆ ಜನರು ಏನು ಮಾಡಬೇಕು ಎಂದು ಬೇಸರ ವ್ಯೆಕ್ತಪಡಿಸಿದರು.

300x250 AD

ಈ ಮೊದಲು ನಿವೇಶನ ಹಕ್ಕು ಪತ್ರ ಜನರಿಗೆ ನೀಡಲಾಯಿತು. ಹಾಗೂ ಕೃಷಿ ಇಲಾಖೆಯ ವತಿಯಿಂದ ಫಲಾನುಭವಿಗಳಿಗೆ ಕೃಷಿ ಪೈಪ್ ಹಾಗೂ ತಾಡಪತ್ರಿ ವಿತರಿಸಲಾಯಿತು. ವಿಶೇಷಚೇತನರಿಗೆ ಸರ್ಕಾರದ ಉಚಿತ ವಿಲ್ ಚೆಕ್ ನೀಡಲಾಯಿತು. ಈ ಸಂದರ್ಭದಲ್ಲಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಕುಲಸಚಿವೆ ಜಯಲಕ್ಷ್ಮಿ ರಾಯಕೋಡ, ತಹಶೀಲ್ದಾರ್ ಮಂಜುನಾಥ ಮನ್ನೋಳಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಆನಂದ್ ಬಡಕುಂದ್ರಿ, ಡಿವೈಎಸ್ಪಿ ಶಿವಾನಂದ ಕಟಗಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಗಾ.ಪಂ‌ ಪಿಡಿಓಗಳು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top