Slide
Slide
Slide
previous arrow
next arrow

ಭಾರತೀಯ ಪರಂಪರೆಯಲ್ಲಿ ಸಂಗೀತಕ್ಕೆ ಶ್ರೇಷ್ಠ ಸ್ಥಾನ: ಮಣಕೀಕರ್

300x250 AD

ಕುಮಟಾ: ಭಾರತೀಯ ಸಂಸ್ಕೃತಿಯ ಮೂಲಸ್ತಂಭ ಸಂಗೀತ. ಇದರ ಜೊತೆಗೆ ನೃತ್ಯ ಮೊದಲಾದ ಲಲಿತಕಲೆಗಳು ನಮ್ಮ ಸಂಸ್ಕೃತಿಗಳ ಪ್ರತಿಬಿಂಬವಾಗಿದೆ. ನಮ್ಮ ಪ್ರಾಚೀನರು ಈ ಎಲ್ಲ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಎಲುಬು ಮತ್ತು ಕೀಲು ತಜ್ಞ ಡಾ. ಶಶಾಂಕ ಮಣಕೀಕರ್ ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಬಗ್ಗೋಣದ ಸ್ವರ ಸಾಧನಾ ಸಂಗೀತ ವಿದ್ಯಾಲಯ ಹಾಗೂ ಕಲ್ಕತ್ತಾದ ಸುರ್ ಸಂಗಮ ಇವರ ಸಂಯುಕ್ತ ಆಶ್ರಯದಲ್ಲಿ, ಮಹಾಲಕ್ಷ್ಮೀ ಕಂಫರ್ಟ್‌ನಲ್ಲಿರುವ ಶ್ರೀಧಾಮ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ‘ನಾದೋಪಾಸನಾ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಿ.ಪಂ.ಜಿ.ಆರ್ ಭಟ್ಟ ಬಾಳೆಗದ್ದೆ ಹಾಗೂ ದಿ. ಪಂ.ಎನ್.ಎಸ್. ಹೆಗಡೆ ಹಿರೇಮಕ್ಕಿ ಇವರುಗಳ ಸಂಸ್ಮರಣೆಯೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸನ್ಮಾನ, ಸಂಗೀತ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಪರಮಾತ್ಮನ ಸಾಧನೆಗಾಗಿ ಲಲಿತಕಲೆ ಉತ್ಪತ್ತಿಯಾಯಿತು ಎಂಬುದರ ಉಲ್ಲೇಖ ಪುರಾಣಗಳಲ್ಲಿದೆ. ಭಾರತೀಯ ಪರಂಪರೆಯಲ್ಲಿ ಲಲಿತಕಲೆಗಳಲ್ಲಿ ಸಂಗೀತವು ಶ್ರೇಷ್ಠ ಸ್ಥಾನವನ್ನು ಪಡೆದಿದೆ. ನಾನೂ ಸಂಗೀತಾಸಕ್ತನಾಗಿದ್ದು, ತಬಲಾ‌ ಕಲಿಯಲು ಪ್ರಯತ್ನ ಮಾಡಿದ್ದೆ, ಆದರೆ ಸಾಧನೆ ಸಾಧ್ಯವಾಗಲಿಲ್ಲ. ಸಂಗೀತದ ಆಸಕ್ತಿ ಹೆಚ್ಚಿದೆ ಎಂದರು.

ಸಂಗೀತ ಪ್ರಕೃತಿ ಮತ್ತು ಮಾನವನ ಅವಿನಾಭಾವ ಸಂಬಂಧದ ದ್ಯೋತಕವೂ ಹೌದು. ಸಂಗೀತಕ್ಕೆ ತಲೆಭಾಗದವರಿಲ್ಲ, ತಲೆದೂಗದವರಿಲ್ಲ. ಕಿಂಚಿತ್‌ ಭಕ್ತಿಯಿಂದೊಡಗೂಡಿದ ಗೀತವು ಅನಂತಾನಂತ ಕೋಟಿ ಜಪಕ್ಕೆ ಸರಿಯಾದುದು ಎಂದು ಬಸವಣ್ಣನ ನುಡಿಯನ್ನು ಅವರು ಸ್ಮರಿಸಿಕೊಂಡ ಅವರು ಪಾಶ್ಚಾತ್ಯ ಸಂಸ್ಕೃತಿಗಳ ಒಲವು ಹೆಚ್ಚುತ್ತಿರುವ ಬಗ್ಗೆ ವಿಷಾದಿಸಿದರು. ಮಕ್ಕಳಲ್ಲಿ ಸುಜ್ಞಾನ ತುಂಬುವ ಇಂತಹ ಅದ್ಭುತ ಕಾರ್ಯಕ್ರಮ ಸಂಘಟಿಸಿದ್ದಕ್ಕಾಗಿ ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು.

300x250 AD

ಉದ್ಘಾಟನೆಯ ನಂತರ ಅಂತರರಾಷ್ಟ್ರೀಯ ಖ್ಯಾತಿಯ ತಬಲವಾದಕ ಪಂ. ಶಶಿಕಾಂತ (ನಾನಾ)ಮುಳೆ, ಮುಂಬೈ ಇವರಿಂದ ನಡೆದ ತಬಲಾ ಪ್ರಾತ್ಯಕ್ಷಿಕೆ ಎಲ್ಲರ ಗಮನ ಸೆಳೆಯಿತು. ತಬಲಾ ನುಡಿಸುವಾಗ ಕೈಗಳನ್ನು ಬಳಸುವ ರೀತಿ, ಎದುರಾಗುವ ವಿವಿಧ ಸಮಸ್ಯೆಗಳು, ಜನರನ್ನು ಹಾಗೂ ಸಂಗೀತಗಾರರಿಗೆ ರಂಜಿಸುವ ರೀತಿಯಲ್ಲಿ ತಬಲಾ‌ ನುಡಿಸುವುದು ಹಾಗೂ ಇತರ ವಿಚಾರಗಳನ್ನು ಸಭೆಗೆ ತಿಳಿಸಿದ ಅವರು, ನಿರಂತರ ಅಭ್ಯಾಸವೊಂದೇ ಸಾಧನೆಯ ಮೆಟ್ಟಿಲು ಎಂದು ಅಭಿಪ್ರಾಯಪಟ್ಟರು.

ನಾನಾ ಅವರ ಶಿಷ್ಯ ಆದಿತ್ಯ ಪನ್ವಲ್ಕರ್ ತಬಲಾದಲ್ಲಿ ಸಹಕರಿಸಿದರು. ರಾಜೇಶ ಮಧುಕರ ಕಾಕಡೆ ನಾನಾ ತಿಳಿಸಿದ ತಬಲಾದ ಕುರಿತಾದ ವಿವರಗಳನ್ನು ಭಾಷಾಂತರಿಸಿ ಸಭೆಗೆ ತಿಳಿಸಿದರು. ಡಾ. ಸಂತೋಷ ಚಂದಾವರಕರ್ ಅವರ ತಬಲಾ ಸೋಲೋ ಜನಮನ ರಂಜಿಸಿತು. ನಗ್ಮಾದಲ್ಲಿ ಸತೀಶ್ ಭಟ್ಟ ಹೆಗ್ಗಾರ ಸಹಕರಿಸಿದರು. ವಿ. ಶ್ರೀಧರ ಹೆಗಡೆ ಕಲಭಾಗ ‘ಸಂಧ್ಯಾಗಾನ’ ಕಾರ್ಯಕ್ರಮ ನಡೆಸಿಕೊಟ್ಟರು. ತಬಲಾದಲ್ಲಿ ವಿ.ಎನ್.ಜಿ ಹೆಗಡೆ ಕಪ್ಪೆಕೆರೆ, ಸಂವಾದಿನಿಯಲ್ಲಿ ಸತೀಶ ಭಟ್ಟ ಹೆಗ್ಗಾರ ಸಾತ್ ನೀಡಿದರು.

ಈ ಸಂದರ್ಭದಲ್ಲಿ ಸ್ವರ ಸಾಧನಾ ಸಂಗೀತ ವಿದ್ಯಾಲಯದ ಲಕ್ಷ್ಮೀ ಹೆಗಡೆ, ಸುರ್ ಸಂಗಮದ ಗುರುದತ್ತ ಎ.ಕೆ ಇದ್ದರು. ಅಶೋಕ ಭಟ್ಟ ನಿರೂಪಿಸಿದರು. ಸಂಗೀತಾಸಕ್ತ ನೂರಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಸಾಕ್ಷಿಯಾದರು.

Share This
300x250 AD
300x250 AD
300x250 AD
Back to top