ಜೋಯಿಡಾ: ಇತ್ತೀಚೆಗೆ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ವಯೋ ವೃದ್ಧರ ಆರೋಗ್ಯವನ್ನು ಹೆಚ್ಚಾಗಿ ನಿರ್ಲಕ್ಷ್ಯಿಸುತ್ತಿರುವುದರಿಂದ ಅವರು ಗುಣಪಡಿಸಲಾಗದಂತಹ ಗಂಭೀರ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಅವರ ಆರೋಗ್ಯಕ್ಕೆ ನಾವು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಂಜೀವಿನಿ ಸೇವಾ ಟ್ರಸ್ಟ್ ಅಧ್ಯಕ್ಷ ಸುನೀಲ ದೇಸಾಯಿ ಹೇಳಿದರು.
ಅವರು ಸಂಜೀವಿನಿ ಸೇವಾ ಟ್ರಸ್ಟ್, ಕ್ರೂಗರ್ ಫೌಂಡೇಶನ್ ಕಾರವಾರ, ಏಕಲ ಅಭಿಯಾನ ಬೆಳಗಾವಿ ಹಾಗೂ ಗ್ರಾಮ ಪಂಚಾಯತ್ ಗಾಂಗೋಡಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಲ್ಕರ್ಣಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಬಿರದಲ್ಲಿ ರೋಗಿಗಳ ತಪಾಸಣೆ ಮಾಡಿದ ನಂತರ ಕೆಲಸ ಮುಗಿಯುವುದಿಲ್ಲ. ಇಲ್ಲಿಂದ ನಿಜವಾದ ಕೆಲಸ ಆರಂಭವಾಗುತ್ತದೆ. ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇರುವ ರೋಗಿಗಳಿಗೆ ಉಚಿತ ಮತ್ತು ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡಿ ಅವರಿಗೆ ಸರಿಯಾಗಿ ಮನೆಗೆ ತಲುಪಿಸುವುದು ನಮ್ಮ ಕರ್ತವ್ಯ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಬೆಳಗಾವಿಯ ಡಾ. ವೈಶಾಲಿ ಕಿತ್ತೂರ್ ಮಾತನಾಡಿ ಹಳ್ಳಿ ಜನರು ಆರೋಗ್ಯದ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ಗಾಂಗೋಡಾ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರವೀಣ ಮುರಾರಿ ದೇಸಾಯಿ, ಮಲ್ಕರ್ಣಿ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಮುಖ್ಯೋಪಾಧ್ಯಾಯ ಅರವಿಂದ ನಾಯ್ಕ ಮಾತನಾಡಿದರು.
ಶಿಬಿರದಲ್ಲಿ ಒಟ್ಟು 97 ರೋಗಿಗಳನ್ನು ತಪಾಸಣೆ ಮಾಡಲಾಯಿತು. ಹಾಗೂ 21 ಜನರಿಗೆ ಕನ್ನಡಕ ಹಾಗೂ ಔಷಧಿ ವಿತರಿಸಲಾಯಿತು. 17 ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಸೂಚಿಸಲಾಯಿತು. ಕಾರ್ಯಕ್ರಮದಲ್ಲಿ ಬೆಳಗಾವಿ ನೇತ್ರ ತಜ್ಞ ಡಾ. ಶ್ರೇಯಸ್, ಗಾಂಗೋಡಾ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರವೀಣ ಮುರಾರಿ ದೇಸಾಯಿ, ಮಲ್ಕರ್ಣಿ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಮುಖ್ಯೋಪಾಧ್ಯಾಯ ಅರವಿಂದ ನಾಯ್ಕ, ಸಂಜೀವಿನಿ ಸೇವಾ ಟ್ರಸ್ಟ್ ನ ಗಣೇಶ ವಿರಕ್ತಮಠ, ಜಯಂತ ಗಾವಡಾ, ಈಶ್ವರ ವಡ್ಡರ, ಈಶ್ವರಿ ದೇಸಾಯಿ, ಬಸವಣ್ಣಯ್ಯ ಹಿರೇಮಠ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಭಾಂಡೋಳಕರ, ಅಂಗನವಾಡಿ ಕಾರ್ಯಕರ್ತೆ ಸುನಂದಾ ವೇಳಿಪ, ಊರು ಗಣ್ಯ ಗಜಾನನ ಭಾಂಡೋಳಕರ, ಮುಂತಾದ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.