ಶಿರಸಿ: ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳಿಗೆ ಮಾದಕ ವಸ್ತು ಸೇವನೆಯು ಒಂದು ಕಾರಣವಾಗಿದ್ದು ಇದಕ್ಕೆ ಯುವ ಜನತೆ ಬಲಿಯಾಗುತ್ತಿರುವುದು ಶೋಚನೀಯ ಎಂದು ಸ್ಕೊಡ್‌ವೆಸ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಪ್ರೊ. ಕೆ.ಎನ್.ಹೊಸಮನಿ ಹೇಳಿದರು.
ಅವರು ಉತ್ತರ ಕನ್ನಡ ಜಿಲ್ಲಾ ಪೊಲೀಸ್, ಶಿರಸಿ ಹೊಸ ಮಾರುಕಟ್ಟೆ ಪೋಲೀಸ್ ಠಾಣೆ, ಸ್ಕೊಡ್‌ವೆಸ್ ಸಂಸ್ಥೆ ಹಾಗೂ ರೆಡ್ ಆ್ಯಂಟ್ ಫ್ರೆಂಡ್ಸ್ ಗ್ರೂಪ್ ಶಿರಸಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತು ದುಷ್ಪರಿಣಾಮಗಳ ಬಗ್ಗೆ ಹಮ್ಮಿಕೊಳ್ಳಲಾದ ಜಾಗೃತಿ ಅಭಿಯಾನ-ವಾಕ್ ಮತ್ತು ರನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹೊಸ ಮಾರುಕಟ್ಟೆ ಪಿ.ಎಸ್.ಐ. ರತ್ನಾ ಕೆ. ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದಲ್ಲಿ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿರುವ ಕಾರ್ಯವನ್ನು ಪೋಲೀಸ್ ಇಲಾಖೆ ಮಾಡುತ್ತಿದೆ ಎಂದರು. ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಬಿತ್ತಿ ಪತ್ರ, ಬ್ಯಾನರ್ ಹಿಡಿದರು ಘೋಷಣೆ ಹೇಳುವ ಮೂಲಕ ಮರಾಠಿಕೊಪ್ಪ ಜನವಸತಿ ಪ್ರದೇಶ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಈ ಜಾಗೃತಿ ಅಭಿಯಾನ ವಾಕ್ ಮತ್ತು ರನ್ ಕಾರ್ಯಕ್ರಮದಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ದಯಾನಂದ ಅಗಾಸೆ, ಸಂಸ್ಥೆಯ ಸಿಬ್ಬಂದಿಗಳು, ರೆಡ್ ಆ್ಯಂಟ್ ಫ್ರೆಂಡ್ಸ್ ಗ್ರೂಪ್ ಪ್ರಮುಖರಾದ ಮಹೇಶ ನಾಯ್ಕ, ಸಿಬ್ಬಂದಿಗಳು ಹಾಗೂ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.