ದಾಂಡೇಲಿ: ಆರಂಭದಲ್ಲಿ ಸಂತೋಷ ಹಾಗೂ ವಿನೋದಕ್ಕಾಗಿ ಆರಂಭವಾಗುವ ವ್ಯಸನಗಳಚಟ ಬದುಕನ್ನೇ ನಾಶ ಮಾಡುವ ಮಟ್ಟಕ್ಕೆ ಬೆಳೆದು ನಿಲ್ಲುತ್ತದೆ. ಈ ನಿಟ್ಟಿನಲ್ಲಿ ಯುವಜನತೆ ಜಾಗೃತರಾಗಿರಬೇಕೆಂದು ಡಿವೈಎಸ್ಪಿ ಶಿವಾನಂದ ಕಟಗಿ ಹೇಳಿದರು.
ಅವರು ಶುಕ್ರವಾರ ನಗರದ ಜನತಾ ವಿದ್ಯಾಲಯದ ಆವರಣದಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಥಾಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು. ಜೀವನದಲ್ಲಿ ಉನ್ನತ ಆದರ್ಶ, ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಸಿಪಿ.ಐ ಭೀಮಣ್ಣ.ಎಂ.ಸೂರಿ ಮಾತನಾಡಿ, ಉತ್ತಮ ನಾಗರಿಕರಾಗಲು ಮಕ್ಕಳು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಆರೋಗ್ಯದ ಮೇಲೆ ಪರಿಣಾಮ ಬೀರುವಂತ ವಸ್ತುಗಳ ವ್ಯಸನಿಗಳಾಗಬಾರದು ಎಂದರು. ನಗರ ಠಾಣೆಯ ಪಿಎಸ್ಐಗಳಾದ ಐ.ಆರ್.ಗಡ್ಡೇಕರ ಹಾಗೂ ಯಲ್ಲಪ್ಪ.ಎಸ್ ಅವರು ಮಾದಕ ದ್ರವ್ಯ ವ್ಯಸನ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿಯನ್ನು ಮೂಡಿಸಿ ಮಾತನಾಡಿದರು.
ಜನತಾ ವಿದ್ಯಾಲಯದ ಆವರಣದಿಂದ ಆರಂಭಗೊಂಡ ಜಾಗೃತಿ ಜಾಥಾವು ನಗರದ ಬರ್ಚಿ ರಸ್ತೆ, ಕೆ.ಸಿ ವೃತ, ಪಟೇಲ್ ವೃತ್ತ, ಜೆ.ಎನ್.ರಸ್ತೆ, ಸೋಮಾನಿ ವೃತ್ತ, ಬಂಬೂಗೇಟ್ ಮಾರ್ಗವಾಗಿ ಕೊನೆಯಲ್ಲಿ ಜನತಾ ವಿದ್ಯಾಲಯದ ಆವರಣದಲ್ಲಿ ಸಂಪನ್ನಗೊಂಡಿತು. ಜಾಥಾದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ಭಾಗವಹಿಸಿದ್ದರು.