ಶಿರಸಿ: ರಾಜ್ಯ ಭಾರತೀಯ ಜನತಾ ಪಕ್ಷದ ವಕ್ತಾರರಾಗಿ ವಿಸ್ತಾರ ಮೀಡಿಯಾದ ಸಿಇಓ, ಖ್ಯಾತ ಪತ್ರಕರ್ತ ಹರಿಪ್ರಕಾಶ ಕೋಣೆಮನೆಯನ್ನು ನಿಯುಕ್ತಿಗೊಳಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.
ರಾಜ್ಯ ಬಿಜೆಪಿಯ ಮುಖ್ಯ ವಕ್ತಾರರಾಗಿ ಮಾಜಿ ವಿ.ಪ. ಸದಸ್ಯ ಅಶ್ವತ್ಥನಾರಾಯಣ, ವಕ್ತಾರರಾಗಿ ಹರಿಪ್ರಕಾಶ ಕೋಣೆಮನೆ ಒಳಗೊಂಡು ಛಲವಾದಿ ನಾರಾಯಣಸ್ವಾಮಿ, ತೇಜಸ್ವಿನಿ ಗೌಡ, ಕೆ.ಎಸ್.ನವೀನ ಸೇರಿದಂತೆ 10 ಮಂದಿಯನ್ನು ವಕ್ತಾರರನ್ನಾಗಿ ಘೋಷಿಸಿ ಆದೇಶ ಹೊರಡಿಸಲಾಗಿದೆ. ಹರಿಪ್ರಕಾಶ ಕೋಣೆಮನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನವರಾಗಿದ್ದು ವಿಜಯವಾಣಿ, ವಿಜಯ ಕರ್ನಾಟಕ, ದಿಗ್ವಿಜಯ ಸೇರಿದಂತೆ ಕನ್ನಡದ ಪ್ರಮುಖ ದಿನಪತ್ರಿಕೆ, ಟಿ.ವಿ. ವಾಹಿನಿಯ ಸಂಪಾದಕರಾಗಿ ಪ್ರಖ್ಯಾತಿ ಗಳಿಸಿದ್ದಾರೆ.
ಕೋಣೆಮನೆಗೆ ಜವಾಬ್ದಾರಿ, ಜಿಲ್ಲೆಗೇನು ಲಾಭ: ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಟ್ಟು ರಾಜ್ಯ ಬಿಜೆಪಿಯು ಸಂಘಟನಾತ್ಮಕವಾಗಿ ಸರ್ಜರಿ ನಡೆಸಿದ್ದು, ಸಂಘಟನೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದು ಎದ್ದು ಕಾಣುತ್ತದೆ. ಚಿಕ್ಕಂದಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಭಾವಕ್ಕೆ ಒಳಗಾಗಿ ರಾಷ್ಟ್ರೀಯ ವಿಚಾರಗಳ ಪ್ರಖರ ಪ್ರತಿಪಾದನೆಯ ಮೂಲಕ ರಾಜ್ಯದಲ್ಲಿ ತಮ್ಮದೇ ಅಭಿಮಾನಿ ಬಳಗದ ಜೊತೆಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾಗಿಯೂ ಸಂಘಟನಾತ್ಮಕವಾಗಿ ಛಾಪು ಮೂಡಿಸಿರುವ ಕೋಣೆಮನೆ ಹೆಗಲಿಗೆ ಇದೀಗ ದೊಡ್ಡ ಜವಾಬ್ದಾರಿಯಿಂದು ಹೆಗಲೇರಿದೆ.
ರಾಷ್ಟ್ರೀಯ ಚುನಾವಣೆಗೆ ಸಂಬಂಧಿಸಿ, ಜಿಲ್ಲೆಯಲ್ಲಿ ಭಾಜಪಾ ಬಹಳ ಗಟ್ಟಿಯಾಗಿ ಕಾಣುತ್ತದೆ. ಜೊತೆಗೆ ರಾಜ್ಯ ಉಪಾಧ್ಯಕ್ಷೆಯಾಗಿರುವ ಮಾಜಿ ಶಾಸಕಿ ರೂಪಾಲಿ ನಾಯ್ಕ ಸಹ ಕರಾವಳಿ ಭಾಗದಲ್ಲಿ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಓಡಾಡುತ್ತಿದ್ದಾರೆ. ಈಗಿರುವ ಸಂಘಟನೆಗೆ ಬಲ ತುಂಬುವ ನಿಟ್ಟಿನಲ್ಲಿ ಮತ್ತು ಮುಂದಿನ ಹಂತಕ್ಕೆ ಸಂಘಟನೆಯನ್ನು ಗಟ್ಟಿಗೊಳಿಸುವ ವಿಚಾರದ ಭಾಗವಾಗಿ ರಾಜ್ಯ ಬಿಜೆಪಿ ಕೋಣೆಮನೆಗೆ ಮಣೆ ಹಾಕಿದೆ ಎನ್ನಲಾಗಿದೆ.
ಜಿಲ್ಲಾ ಬಿಜೆಪಿಗೆ ಮತ್ತಷ್ಟು ಬಲ ತುಂಬುವರೇ ಕೋಣೆಮನೆ ?
ವೈಚಾರಿಕವಾಗಿ ಪ್ರಖರ, ಸ್ಪಷ್ಟತೆಯ ಜೊತೆಗೆ ಸಂಘಟನೆಯಲ್ಲಿಯೂ ಸಹ ಓಡಾಡಿ ಅನುಭವ ಉಳ್ಳುವ ಕೋಣೆಮನೆ, ಹೊಸ ಕಾರ್ಯಕರ್ತರನ್ನು ಪಕ್ಷಕ್ಕೆ ಸಜ್ಜುಗೊಳಿಸುವುದರ ಜೊತೆಗೆ ಹಳಬರಿಗೆ ಇನ್ನಷ್ಟು ಉತ್ಸಾಹ ತುಂಬುವುದರಲ್ಲಿ ಎರಡು ಮಾತಿಲ್ಲ. ಜಿಲ್ಲೆಯ ಎಲ್ಲ ತಾಲೂಕುಗಳ ಪರಿಚಯವಿರುವ ಹರಿಪ್ರಕಾಶ ಕೋಣೆಮನೆ, ಸಂಘಟನೆಯಲ್ಲಿ ನಂಬಿಕೆ ಇಟ್ಟು ಕೆಲಸ ಮಾಡುವ ಪ್ರವೃತ್ತಿಯವರಾಗಿದ್ದು, ಎಲ್ಲರನ್ನು ಒಗ್ಗೂಡಿಸಿಕೊಂಡು, ಜೊತೆಗೂಡಿ ಹೆಜ್ಜೆಹಾಕುವ ಮನೋಭಾವ ಅವರ ಕೆಲಸದಲ್ಲಿ ಕಾಣಬಹುದಾಗಿದೆ. ಕಾರ್ಯಕರ್ತರ ಸಂಕಷ್ಟಕ್ಕೆ ಸ್ಪಂದಿಸುವ, ಬಡವರ ಅಳಲಿಗೆ ಮರುಗುವುದರ ಜೊತೆಗೆ ಅವರ ಕಷ್ಟಕ್ಕೆ ಹೆಗಲುಕೊಟ್ಟು ನಿಲ್ಲುವ ಅವರ ಸ್ವಭಾವ, ಕೋಣೆಮನೆಯನ್ನು ಸಾಮಾಜಿಕ ವಲಯದಲ್ಲಿ ಈ ಹಂತಕ್ಕೆ ತಂದು ನಿಲ್ಲಿಸಿದೆಯೆಂದರೆ ತಪ್ಪಾಗಲಾರದು. ಸಣ್ಣ ವಯಸ್ಸಿನಲ್ಲಿಯೇ ಮಾಧ್ಯಮ ರಂಗದಲ್ಲಿ ರಾಜ್ಯ ಹಾಗು ರಾಷ್ಟ್ರೀಯ ಸ್ತರದಲ್ಲಿ ಬೃಹತ್ ಸಾಧನೆಗೈದಿರುವ ಕೋಣೆಮನೆ ಇದೀಗ ರಾಜ್ಯ ಭಾಜಪಾದ ವಕ್ತಾರರಾಗಿ ಆಯ್ಕೆ ಮಾಡಿರುವುದು ಸಂಘಟನಾತ್ಮಕವಾಗಿ ಉತ್ತರ ಕನ್ನಡ ಜಿಲ್ಲಾ ಭಾಜಪಾದ ದೃಷ್ಟಿಯಿಂದ ಮಹತ್ವದ ಹೆಜ್ಜೆ ಎಂದೇ ಗುರುತಿಸಿಕೊಳ್ಳುತ್ತದೆ.
ಸಂಘಟನೆಯಲ್ಲಿ ನಂಬಿಕೆ ಇರಿಸಿರುವ ವ್ಯಕ್ತಿ ನಾನು. ಎಲ್ಲರ ಜೊತೆಗೂಡಿ ನಡೆದಾಗ ಸಾಮೂಹಿಕ ಯಶಸ್ಸು ಸಿಗುತ್ತದೆ. ನನ್ನ ಮೇಲೆ ನಂಬಿಕೆ ಇರಿಸಿ ಪಕ್ಷದ ಹಿರಿಯರು ಜವಾಬ್ದಾರಿ ನೀಡಿದ್ದಾರೆ. ಅದಕ್ಕೆ ನ್ಯಾಯ ಒದಗಿಸಲು ಬದ್ಧನಿದ್ದೇನೆ. ಪ್ರಧಾನಿ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ಮುಂಬರುವ ಲೋಕಸಭೆ ಚುನಾವಣೆಗೆ ರಾಜ್ಯ, ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹಿಂದಿನ ಎಲ್ಲ ಹಿರಿಯರ, ಕಾರ್ಯಕರ್ತರ ನಿಸ್ವಾರ್ಥ ಸೇವೆಯ ಕಾರಣಕ್ಕೆ ಉತ್ತರ ಕನ್ನಡ ಬಿಜೆಪಿ ತಳಮಟ್ಟದಲ್ಲಿ ಸಾಕಷ್ಟು ಸಂಘಟನಾತ್ಮಕವಾಗಿ ಗಟ್ಟಿಯಾಗಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷ ಯಾರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರೂ, ಅವರನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ ಹಾಗು ಜವಾಬ್ದಾರಿ. ಆ ಹಾದಿಯಲ್ಲಿ ಯಾರೇ ಅಭ್ಯರ್ಥಿಯಾದರೂ ಸಹ ಪ್ರಾಮಾಣಿಕ ಕೆಲಸದ ಮೂಲಕ, ಎಲ್ಲರ ಜೊತೆಗೂಡಿ ಭಾಜಪಾವನ್ನು ಗೆಲ್ಲಿಸುತ್ತೇವೆ.– ಹರಿಪ್ರಕಾಶ ಕೋಣೆಮನೆ, ರಾಜ್ಯ ವಕ್ತಾರರು, ಬಿಜೆಪಿ