ದಾಂಡೇಲಿ : ಧಾರವಾಡದಿಂದ ದಾಂಡೇಲಿ ನಗರಕ್ಕೆ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಿಂದ ದಾರಿ ಮಧ್ಯೆ ಬಿದ್ದು ನಾಪತ್ತೆಯಾಗಿದ್ದ ಅಂಚೆ ಟಪಾಲ್ ಬ್ಯಾಗನ್ನು ಪತ್ತೆ ಹಚ್ಚಿ ಅಂಚೆ ಅಧಿಕಾರಿಗಳಿಗೆ ನೀಡುವಲ್ಲಿ ದಾಂಡೇಲಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡದಿಂದ ದಾಂಡೇಲಿ ನಗರಕ್ಕೆ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಕಳುಹಿಸಲಾಗಿದ್ದ ಅಂಚೆ ಟಪಾಲ್ ಬ್ಯಾಗ್ ದಾರಿ ಮಧ್ಯೆ ಬಿದ್ದು ನಾಪತ್ತೆಯಾಗಿತ್ತು. ನಾಪತ್ತೆಯಾಗಿರುವ ಅಂಚೆ ಟಪಾಲ್ ಬ್ಯಾಗನ್ನು ಪತ್ತೆಹಚ್ಚಿ ಒಪ್ಪಿಸುವಂತೆ ಅಂಚೆ ಇಲಾಖೆಯ ಅಧಿಕಾರಿಗಳು ನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು.
ದೂರು ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು ನಾಪತ್ತೆಯಾಗಿರುವ ಅಂಚೆ ಟಪಾಲ್ ಬ್ಯಾಗನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದರು. ತನಿಖೆಯ ಸಮಯದಲ್ಲಿ ಅಂಚೆ ಟಪಾಲ್ ಬ್ಯಾಗ್ ಜೋಯಿಡಾ ತಾಲೂಕಿನ ಬಾಮಣಿಗಿಯಲ್ಲಿ ಇರುವುದನ್ನು ಪತ್ತೆ ಹಚ್ಚಿ, ಸಂಬಂಧಿಸಿದ ಅಂಚೆ ಟಪಾಲ್ ಬ್ಯಾಗನ್ನು ಪಿಎಸ್ಐ ಐ.ಆರ್ ಗಡ್ಡೇಕರ ನೇತೃತ್ವದಲ್ಲಿ ಅಂಚೆ ಇಲಾಖೆಯ ಅಧಿಕಾರಿಗಳಿಗೆ ನಗರ ಪೊಲೀಸ್ ಠಾಣೆಯಲ್ಲಿ ಒಪ್ಪಿಸಲಾಯಿತು.
ಪಿಎಸ್ಐ ಐ.ಆರ್.ಗಡ್ಡೇಕರ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಜಯನಗೌಡ, ಕೃಷ್ಣ, ಶಿವರಾಜ್ ಮತ್ತು ಸುನಿಲ್ ಅವರ ತಂಡ ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.