Slide
Slide
Slide
previous arrow
next arrow

ಜ.28ಕ್ಕೆ ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ ಸುವರ್ಣ ಮಹೋತ್ಸವ

300x250 AD

ಶಿರಸಿ : ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ (ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಿರಸಿ) ಇದರ ಸುವರ್ಣಮಹೋತ್ಸವ ಕಾರ್ಯಕ್ರಮವನ್ನು ಜನವರಿ 28 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಮಾಹಿತಿ ನೀಡಿದರು.

ಬುಧವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಿ ಸುವರ್ಣ ಮಹೋತ್ಸವ ಕಾರ್ಯಕ್ರಮಗಳ ರೂಪುರೇಷೆಯನ್ನು ಸಿದ್ಧಪಡಿಸಲಾಯಿತು.
ಜನವರಿ 28ರ ಇಡೀ ದಿನ ಕಾರ್ಯಕ್ರಮ ನಡೆಯಲಿದ್ದು, ಸುವರ್ಣ ಮಹೋತ್ಸವ ವರ್ಷಾಚರಣೆ ಉದ್ಘಾಟನೆ, ಕೆ. ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿ, ಅಜ್ಜೀಬಳ ದತ್ತಿನಿಧಿ ಪುರಸ್ಕಾರ, ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮ ನಡೆಸಲು ಯೋಜಿಸಲಾಯಿತು. ಅಂದು ಸಂಜೆ ಮನರಂಜನಾ ಕಾರ್ಯಕ್ರಮ ಹಾಗೂ ಪತ್ರಕರ್ತರು ಹಾಗೂ ಕುಟುಂಬದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಸಲು ಸಭೆ ಒಪ್ಪಿಗೆ ಸೂಚಿಸಿತು.

ಇದೇ ವೇದಿಕೆಯಲ್ಲಿ ಪತ್ರಕರ್ತರ ಕ್ಷೇಮನಿಧಿ ಕೂಪನ್, ಸುವರ್ಣ ಸಂಭ್ರಮ ಒಂದು ವರ್ಷದ ಕಾರ್ಯಕ್ರಮದ ಲೊಗೋ ಲೋಕಾರ್ಪಣೆ, ಸಂಘದ ಸದಸ್ಯರ ಯಾದಿ ಒಳಗೊಂಡ ಕ್ಯಾಲೆಂಡರ್, ಒಂದು ವರ್ಷದ ಆಯಾ ತಾಲೂಕಾ ಕಾರ್ಯಕ್ರಮದ ಯಾದಿ ಬಿಡುಗಡೆ ನಡೆಯಲಿದೆ. ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ವರ್ಷವಿಡೀ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಪ್ರತಿ ತಾಲೂಕಿನಲ್ಲೂ ತಿಂಗಳಿಗೊಂದು ಕಾರ್ಯಕ್ರಮ ನಡೆಸುವ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.

ಜಿಲ್ಲಾಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಅವರಿಗೆ ಕಾರ್ಯಕ್ರಮದ ಯಾದಿ ಹಾಗೂ ಸುವರ್ಣ ಮಹೋತ್ಸವ ಸಮಿತಿ ರಚಿಸಲು ಅಧಿಕಾರ ಹಾಗೂ ರಾಜ್ಯ ಸಮಿತಿ ಸದಸ್ಯ ಬಸವರಾಜ ಪಾಟೀಲ ಅವರಿಗೆ ಪದಾಧಿಕಾರಿಗಳೊಂದಿಗೆ ಪ್ರತಿ ತಾಲೂಕಾ ಘಟಕಕ್ಕೆ ಭೇಟಿ ನೀಡಿ ಆಮಂತ್ರಣ ನೀಡುವ ಜವಾಬ್ದಾರಿಯನ್ನು ವಹಿಸಲಾಯಿತು.

300x250 AD

ಸಭೆಯಲ್ಲಿ ಉಪಾಧ್ಯಕ್ಷ ವಿಠ್ಠಲದಾಸ ಕಾಮತ್, ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ, ಕಾರ್ಯದರ್ಶಿ ನರಸಿಂಹ ಸಾತೊಡ್ಡಿ, ಪ್ರದೀಪ ಶೆಟ್ಟಿ ರಾಜ್ಯ ಸಮಿತಿ ಸದಸ್ಯ ಬಸವರಾಜ ಪಾಟೀಲ, ಕಾರ್ಯಕಾರಿಣಿ ಸದಸ್ಯರಾದ ಯು.ಎಸ್. ಪಾಟೀಲ, ಪ್ರಭಾವತಿ ಜಯರಾಜ್, ಶಾಂತೇಶಕುಮಾರ ಬೆನಕನಕೊಪ್ಪ, ವಿದ್ಯಾಧರ ಮೊರಬಾ, ಕೃಷ್ಣಮೂರ್ತಿ ಕೆರೆಗದ್ದೆ, ರಾಘವೇಂದ್ರ ಬೆಟ್ಟಕೊಪ್ಪ ಮುಂತಾದವರು ಉಪಸ್ಥಿತರಿದ್ದರು.

1974ರಲ್ಲಿ ಹಿರಿಯ ಪತ್ರಕರ್ತ ನ್ಯೂಸ್ ಬ್ಯೂರೋ ಖ್ಯಾತಿ ಪಡೆದಿದ್ದ ಜಿ.ಎಸ್. ಹೆಗಡೆ ಅಜ್ಜೀಬಳ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡ ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ (ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ) ಶಿರಸಿ, ಈವರೆಗೆ ಸಾವಿರಾರು ಸದಸ್ಯರನ್ನು ಸಂಘದ ಸದಸ್ಯರನ್ನಾಗಿ ಮಾಡಿಕೊಂಡು ನಡೆದಿದ್ದು ಇತಿಹಾಸ. ಪ್ರಸ್ತುತ 140ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಜಿಲ್ಲೆಯ 11 ತಾಲೂಕಿನಲ್ಲೂ ಸಂಘ ತಾಲೂಕಾ ಘಟಕವನ್ನು ತೆರೆದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ (ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ) ಶಿರಸಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಂಗ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ 4 ಗುಂಟೆ ಸ್ವಂತ ನಿವೇಶನ ಹೊಂದಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಟ್ಟಡದ ಮುಂದುವರಿದ ಕಾಮಗಾರಿ ಪ್ರಗತಿಯಲ್ಲಿದ್ದು ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸುವ ಆಶಯ ಹೊಂದಿದ್ದು ಇದೇ ಸಂದರ್ಭದಲ್ಲಿ ಪತ್ರಕರ್ತರ ಕ್ಷೇಮನಿಧಿಗಾಗಿ 50 ಲಕ್ಷ ರೂಪಾಯಿಗಳನ್ನು ಸಂಗ್ರಹಿಸುವ ಗುರಿಯನ್ನು ಸಹ ಹೊಂದಲಾಗಿದೆ.
ಈ ಹಿಂದೆ ಪತ್ರಿಕಾ ಮಂಡಳಿ ಹಾಗೂ ಸಂಘದ ಅಧ್ಯಕ್ಷರಾಗಿ ಜಿ.ಎಸ್. ಹೆಗಡೆ ಅಜ್ಜೀಬಳ, ಟಿ.ಎಂ. ಸುಬ್ಬರಾಯ, ಶಿವಾನಂದ ಕಳವೆ, ಸಚ್ಚಿದಾನಂದ ಹೆಗಡೆ, ಕೃಷ್ಣಮೂರ್ತಿ ಹೆಬ್ಬಾರ್,ಮಂಜುನಾಥ ಭಟ್ ಬೆಳಖಂಡ, ಜಿ. ಸುಬ್ರಾಯ ಭಟ್ ಬಕ್ಕಳ, ಗಂಗಾಧರ ಕೊಳಗಿ, ರಾಧಾಕಷ್ಣ ಭಟ್ ಭಟ್ಕಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಪತ್ರಿಕಾ ದಿನಾಚರಣೆ, ಉತ್ತರ ಕನ್ನಡ ಜಿಲ್ಲಾ ಪತ್ರಕರ್ತರ ಸಮ್ಮೇಳನ, ಜಿಲ್ಲಾ ಅಭಿವೃದ್ಧಿ ಸಂಕೀರಣ, ಕೆ. ಶ್ಯಾಮರಾವ್ ಪ್ರಶಸ್ತಿ ಹಾಗೂ ಅಜ್ಜೀಬಳ ದತ್ತಿನಿಧಿ ಪುರಸ್ಕಾರ, ಉಪನ್ಯಾಸ ಕಾರ್ಯಕ್ರಮ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಲ್ಲದೇ, ಶಿರಸಿಯ ಎಂ.ಎಂ. ಆರ್ಟ್ಸ್ ಆಂಡ್ ಸೈನ್ಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ ಆರಂಭಿಸಲು ಪ್ರಯತ್ನಿಸಿದ್ದು ಇಂದು ಇತಿಹಾಸ.

Share This
300x250 AD
300x250 AD
300x250 AD
Back to top