ಭಟ್ಕಳ: ತಾಲೂಕಿನ ಬೆಂಗ್ರೆ ಗ್ರಾಮ ಪಂಚಾಯತ ವ್ಯಾಪ್ತಿಯ ಪಡುಶಿರಾಲಿ ಕೆಲ್ಸಿ ಮನೆ ಮತ್ತು ಕಂಚಿಕಳ್ಳಿ ಮನೆ ಸಮೀಪ ಎಮ್.ಎಸ್.ಐ.ಎಲ್ ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿ ನೂರಾರು ಗ್ರಾಮಸ್ಥರು ಬೆಂಗ್ರೆ ಪಂಚಾಯತನಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಪ್ರಭಾಕರ ಚಿಕ್ಮನೆ ಮತ್ತು ಬೇಂಗ್ರೆ ಪಂಚಾಯತ್ ಅಧ್ಯಕ್ಷರಾದ ಪ್ರಮೀಳಾ ಆಂಥೋನಿ ಡಿಕೋಸ್ತಾರಿಗೆ ಮನವಿ ನೀಡಿದ ಸ್ಥಳಿಯರು ಯಾವುದೇ ಕಾರಣಕ್ಕೂ ಈ ಸ್ಥಳದಲ್ಲಿ ಮದ್ಯದಂಗಡಿಯನ್ನು ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು
ಈ ಹಿಂದೆ ಅದೇ ಜಾಗದಲ್ಲಿ ಅದೇ ಹೆಸರಿನಲ್ಲಿ ಎಮ್ಎಸ್ಐಎಲ್ ಮದ್ಯದಂಗಡಿಯನ್ನು ತೆರೆಯಲು ನಿರಾಪೇಕ್ಷಣಾ ಅರ್ಜಿಯನ್ನು ಸಲ್ಲಿಸಲಾಗಿತ್ತು ಇದರ ವಿರುದ್ಧ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಹಿನ್ನೆಯಲ್ಲಿ ಗ್ರಾಮ ಪಂಚಾಯತ್ ನಿರಾಪೇಕ್ಷಣಾ ಪತ್ರವನ್ನು ನೀಡಿರಲಿಲ್ಲ. ಆದರೆ ಈಗ ಮತ್ತೊಮ್ಮೆ ನಿರಾಪೇಕ್ಷಣಾ ಪತ್ರಕ್ಕಾಗಿ ನೀಡಿದ ಅರ್ಜಿಯನ್ನು ಪಂಚಾಯತ ಸ್ವೀಕರಿಸಿದೆ. ಆದರೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಈ ಕ್ರಮ ಒಪ್ಪತಕ್ಕದ್ದಲ್ಲ. ಅಲ್ಲದೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು ಹಾಗೂ ದೇವಸ್ಥಾನವು ಕೂಡ ಮದ್ಯದಂಗಡಿ ತೆರೆಯಲು ಉದ್ದೇಶಿಸಿರುವ ಜಾಗಕ್ಕೆ ಅತ್ಯಂತ ಸಮೀಪವಿದೆ ಆದರೂ ಕೂಡ ಪಂಚಾಯತ್ ನೀರಾಪೇಕ್ಷಣಾ ಪತ್ರಕ್ಕಾಗಿ ನೀಡಿದ ಅರ್ಜಿಯನ್ನು ಪಡೆದುಕೊಂಡು ಸಾರ್ವಜನಿಕರ ಆಕ್ಷೇಪಣೆಗಾಗಿ ನೋಟಿಸ್ ಲಗತ್ತಿಸಿದೆ ಇದರಿಂದ ನಾವು ಪದೇ ಪದೇ ಕೆಲಸ ಬಿಟ್ಟು ಮನವಿ ಕೊಡುವ ಪರಿಸ್ಥಿತಿ ತಲೆದೋರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.
ಇದೆ ರಸ್ತೆಯಿಂದ ಶಾಲಾ ವಿದ್ಯಾರ್ಥಿಗಳು, ಮಹಿಳೆಯರು ಅವ್ಯಾಹತವಾಗಿ ಸಂಚರಿಸಿರುತ್ತಾರೆ. ಇಲ್ಲಿ ಮದ್ಯದ ಅಂಗಡಿ ತೆರೆಯುತ್ತಿರುವುದರಿಂದ ಯುವಪೀಳಿಗೆ ದಾರಿ ತಪ್ಪುವ ಸಾದ್ಯತೆಯಿರುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಗ್ರಾಮಸ್ಥನೋರ್ವ ಕಳೆದ 2017 ರಲ್ಲಿ ಇದೆ ಸ್ಥಳದಲ್ಲಿ ಮದ್ಯದಂಗಡಿಗೆ ತೆರೆಯಲು ಮುಂದಾದ ವೇಳೆ ಗ್ರಾಮಸ್ಥರೆಲ್ಲ ಸೇರಿ ಜಿಲ್ಲಾಧಿಕಾರಿಗಳಿಗೆ ಅಬಕಾರಿ ಕಚೇರಿ ಹಾಗೂ ಗ್ರಾಮ ಪಂಚಾಯತಗೆ ಮನವಿ ನೀಡಿ ಮದ್ಯದಂಗಡಿ ತೆರೆಯದಂತೆ ಮಾಡಿದ್ದೆವು. ಆದರೆ ಮತ್ತೆ ಇದೆ ಸ್ಥಳದಲೇ ಅದೇ ವ್ಯಕ್ತಿ ಮದ್ಯದಂಗಡಿ ತೆರೆಯಲು ಮುಂದಾಗಿದ್ದಾರೆ. ಆದರೆ ನಮ್ಮ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ವಿರೋಧವಿದೆ ಎಂದರು
ಮನವಿ ಸ್ವೀಕರಿಸಿ ಮಾತನಾಡಿದ ಪಂಚಾಯತ ಅಧ್ಯಕ್ಷೆ ಪ್ರಮೀಳಾ ಡಿಕೊಸ್ತಾ ನಮ್ಮ ನಿಲುವು ಕೂಡ ಮದ್ಯದಂಗಡಿಯನ್ನು ತೆರೆಯುವುದರ ವಿರುದ್ಧವೆ ಇದೆ ಆದರೆ ಬಂದ ಅರ್ಜಿಯನ್ನು ಸ್ವೀಕರಿಸಿ ಅದನ್ನು ಕ್ರಮಬದ್ಧವಾಗಿ ಸಾಮಾನ್ಯ ಸಭೆಯಲ್ಲಿಟ್ಟು ಚರ್ಚಿಸಿ ಬಗೆಹರಿಸುವ ನಿಟ್ಟಿನಲ್ಲಿ ಯೋಚಿಸಲಾಗಿತ್ತು ಎಂದರು.