ದಾಂಡೇಲಿ : ನಗರದ ಹಾರ್ನಬಿಲ್ ಸಭಾಭವನದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶ ದಾಂಡೇಲಿ ವಿಭಾಗದ ಆಶ್ರಯದಡಿ ಅಗ್ನಿಶಾಮಕ ದಳದವರ ಸಹಯೋಗದೊಂದಿಗೆ ಬೆಂಕಿಯಿಂದ ಕಾಡಿನ ರಕ್ಷಣೆ ಕುರಿತು ಕಾರ್ಯಗಾರವನ್ನು ಶನಿವಾರ ಆಯೋಜಿಸಲಾಗಿತ್ತು.
ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ನಿಲೇಶ್ ಶಿಂಧೆ, ಬೇಸಿಗೆ ಸಮಯದಲ್ಲಿ ಅಗ್ನಿ ಅವಘಡಗಳಾಗಿ ಕಾಡು ಹಾಗೂ ವನ್ಯಸಂಪತ್ತಿನ ಮೇಲೆ ಮಾರಕ ಪರಿಣಾಮವಾಗುತ್ತಿದೆ. ಕಾಡು, ವನ್ಯ ಸಂಪತ್ತು ಉಳಿದರೇ ಮನುಕುಲದ ಉಳಿವು ಸಾಧ್ಯ. ಈ ಈ ನಿಟ್ಟಿನಲ್ಲಿ ಅರಣ್ಯ ಮತ್ತು ವನ್ಯ ಸಂಪತ್ತನ್ನು ಬೆಂಕಿಯಿಂದ ರಕ್ಷಿಸಬೇಕಾದ ಹಾಗೂ ಅದಕ್ಕೆ ಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾದ ಗುರುತರ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಬೆಂಕಿಯಿಂದ ಅರಣ್ಯ ಹಾಗೂ ವನ್ಯ ಸಂಪತ್ತನ್ನು ರಕ್ಷಣೆ ಮಾಡುವ ವಿಧಾನದ ಬಗ್ಗೆ ಅರಿವನ್ನು ಮೂಡಿಸಲು ಈ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮರಾಕ್ಷರ ಅವರು ಮಾತನಾಡುತ್ತಾ, ಕಳೆದ ವರ್ಷ ಸಾಕಷ್ಟು ಪ್ರಮಾಣದಲ್ಲಿ ಅಗ್ನಿ ದುರ್ಘಟನೆಗಳು ನಡೆದು ವನ್ಯ ಸಂಪತ್ತಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ವರ್ಷ ಹಾಗೂ ಮುಂದಿನ ವರ್ಷಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನೆಟ್ಟಿನಲ್ಲಿ ಈ ಕಾರ್ಯಗಾರ ಪ್ರೇರಣಾದಾಯಿಯಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಅಗ್ನಿಶಾಮಕ ದಳದ ಅಧಿಕಾರಿ ಟಿ.ಸಿ.ಜಾರ್ಜ್ ಅವರು ಬೆಂಕಿ ನಂದಿಸುವಿಕೆಯ ವಿಧಾನಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ವಲಯಾರಣ್ಯಾಧಿಕಾರಿಗಳಾದ ಎ.ಎಸ್.ಬೈಲಾ, ಮಹಾಂತೇಶ್ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು. ವಲಯಾರಣ್ಯಾಧಿಕಾರಿ ಎ.ಎಸ್.ಬೈಲಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಮ್ರಾನ್.ಎ.ಆರ್.ಪಟೇಲ್ ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮಕ್ಕೆ ವಿಶ್ವನಾಥ ಪರಬಗೊಂಡ ವಂದಿಸಿದರು. ಕಾರ್ಯಾಗಾರದಲ್ಲಿ ವನ್ಯಜೀವಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು.