ಹೊನ್ನಾವರ : ಖ್ಯಾತ ಹಿರಿಯ ವೈದ್ಯರು ಹಲವು ದಶಕಗಳಿಂದ ತಾಲೂಕಿನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ, ಗ್ರಾಮೀಣ ಪ್ರದೇಶದ ಜನತೆಯ ನೆಚ್ಚಿನ ವೈದ್ಯರಾಗಿದ್ದ, ಕರ್ಕಿ ಶಾರದಾ ನರ್ಸಿಂಗ್ ಹೋಂನ ಡಾ. ಟಿ.ಎನ್. ಭಾಸ್ಕರ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ.
ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ 25 ವರ್ಷಗಳಿಗೂ ಅಧಿಕ ಕಾಲ, ಏಕೈಕ ವೈದ್ಯಾಧಿಕಾರಿಯಾಗಿ, ಒಬ್ಬ ಸ್ತ್ರೀರೋಗ ತಜ್ಞರಾಗಿ, ಒಬ್ಬ ಪ್ಲಾಸ್ಟರ್ ಹಾಕಬಲ್ಲ ಆರ್ಥೋಪೆಡಿಕ್ಸ್ ಸರ್ಜನ್ ಆಗಿ, ಒಬ್ಬ ಜನರಲ್ ಸರ್ಜನ್ ಕೂಡ ಆಗಿ, ಬಹುವಿಧದಲ್ಲಿ ಸೇವೆ ಸಲ್ಲಿಸಿದ್ದ ಇವರು ಇನ್ನಿಲ್ಲ ಅನ್ನೋ ಸುದ್ದಿ ಹೊನ್ನಾವರದ ಜನತೆಯನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.
ಡಾ.ಭಾಸ್ಕರ್ ಅವರ ಜನಪ್ರೀಯತೆಯೋ, ಅವರ ಕೈಗುಣವೋ, ಅವರ ಆಶೀರ್ವಾದವೋ, ಪ್ರೀತಿಯೋ, ಇನ್ನೇನನ್ನೋ ಜನ ಅವರಿಂದ ಅಪೇಕ್ಷಿಸುತ್ತಿದ್ದರು. ವಯಸ್ಸಾಗಿದೆ, ಅವರಿಂದ ಪ್ರಾಕ್ಟೀಸ್ ಆಗೋದಿಲ್ಲ ಅನ್ನುವುದನ್ನೂ ಕೇಳದೇ, ಹುಡುಕಿಕೊಂಡು ಅವರ ಮನೆ ಬಳಿ ಹೋಗಿ ಚಿಕಿತ್ಸೆ ಪಡೆದುಕೊಂಡು ಬರುತ್ತಿದ್ದರು. ಅಂತಹ ವ್ಯಕ್ತಿತ್ವದ ಡಾಕ್ಟರ್ ಅವರಾಗಿದ್ದರು.
ಡಾ.ಟಿ.ಎನ್ ಭಾಸ್ಕರ್ ಹೊನ್ನಾವರ ತಾಲೂಕಿಗೆ ಸಲ್ಲಿಸಿದ ಸೇವೆ ಅನುಪಮವಾದದ್ದು. ಡಾ.ಭಾಸ್ಕರ್ ಮೂಲತಃ ಶೃಂಗೇರಿಯವರು. ಮೊದಲು ಕಾರವಾರದಲ್ಲಿ, ಗೋಕರ್ಣದಲ್ಲಿ, ಮಂಗಳೂರಿನ ಆಸ್ಪತ್ರೆಯಲ್ಲೂ ಸೇವೆ ಸಲ್ಲಿಸಿ, ಬಳಿಕ ಹೊನ್ನಾವರಕ್ಕೆ ಬಂದವರು ಇಲ್ಲೇ ನೆಲೆ ನಿಂತರು. ಹೊನ್ನಾವರದ ಜನತೆ ಕೂಡ ಇವರನ್ನು ಪ್ರೀತಿಯಿಂದ ಉಳಿಸಿಕೊಂಡಿದ್ದರು. ಡಾ.ಭಾಸ್ಕರ್ ಕೂಡ, ಅಷ್ಟೇ ಪ್ರೀತಿಯಿಂದ ದಿನದ 20 ತಾಸುಗಳ ಕಾಲ ಸೇವೆ ಸಲ್ಲಿಸಿದ್ದ ದಾಖಲೆಯೂ ಇದೆ. ಬೆಳಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದುಡಿದರೂ, ಮತ್ತೊಂದು ಹೆರಿಗೆ ನೋವು ಅಂತ ಮಾಹಿತಿ ತಿಳಿದರೆ, ಊಟ,ನಿದ್ದೆ ಬಿಟ್ಟು ಆಸ್ಪತ್ರೆಗೆ ಬರುತ್ತಿದ್ದರು.
ಮಧ್ಯರಾತ್ರಿಯವರೆಗೆ ನಾರ್ಮಲ್ ಡಿಲೆವರಿಗಾಗಿ ಕಾದು ಮನೆಗೆ ಹೋಗಿ ಮತ್ತೆ ಬೆಳಗಿನ ಜಾವ ಬರುತ್ತಿದ್ದರು. ಬೆಳಗ್ಗೆ ಅಪಘಾತ ಪ್ರಕರಣ, ವಿಷ ಕುಡಿದವರ ಪ್ರಕರಣ, ಹಾವು ಕಚ್ಚಿದ ಪ್ರಕರಣ.. ಹೀಗೆ ದಿನಕ್ಕೆ 200 ರಿಂದ 300 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಹೀಗೆ 25 ವರ್ಷಗಳ ಕಾಲ ಒಂದೇ ರೀತಿಯಲ್ಲೇ ಚಿಕಿತ್ಸೆ ನೀಡಿದ್ದಾರೆ. ಇದೇ ಕಾರಣಕ್ಕೆ ಹೊನ್ನಾವರದ ಸರಕಾರಿ ಆಸ್ಪತ್ರೆ ಡಾ.ಟಿ.ಎನ್.ಭಾಸ್ಕರ್ ಆಸ್ಪತ್ರೆ ಅಂತಾನೇ ಪ್ರಸಿದ್ದಿಯಾಗಿದೆ.
ಇದೆಲ್ಲದರ ಹೊರತಾಗಿಯೂ ಇವರ ಸೇವೆ ಅನನ್ಯ. ಲಯನ್ಸ್ ಕ್ಲಬ್ ಸದಸ್ಯರಾಗಿ, ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಮೆರುಗು ನೀಡಿದರು. ಆಗ ಹೊನ್ನಾವರ ಆಸ್ಪತ್ರೆಯಲ್ಲಿ ಹೆರಿಗೆಗೆ ಒಂದು ಟೇಬಲ್ ಇರಲಿಲ್ಲ. ದೇಣಿಗೆಯಿಂದ ಟೇಬಲ್ ತರಿಸಿ, ಹೆರಿಗೆಗಾಗಿ ಒಂದು ವಾರ್ಡ್, ಲೇಬರ್ ವಾರ್ಡ್ , ಹಾಗೇ ಬಾಣಂತಿಯರಿಗಾಗಿ 25-30 ಜನ ಮಲಗಿಕೊಳ್ಳುವ ಹೆರಿಗೆ ವಾರ್ಡ್ ಅನ್ನು ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸಿದರು.
ಭಾರತದ ಪ್ರಥಮ ಮಹಾ ದಂಡನಾಯಕ ಜನರಲ್ ಕಾರ್ಯಪ್ಪ ಅದನ್ನು ಉದ್ಘಾಟಿಸಿದ್ದರು. ಹೀಗೆ ಒಬ್ಬ ವೈದ್ಯ, ವೈದ್ಯಾಧಿಕಾರಿಯಾಗಿ, ವಿವಿಧ ವಿಷಯಗಳಲ್ಲಿ ಪರಿಣಿತನಾಗಿ ಮಾತ್ರವಲ್ಲ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಒಂದೆರಡು ಕಟ್ಟಡಗಳನ್ನು ಕಟ್ಟಿಸಿದ್ದರು. ಮೊದಲು ಶರಾವತಿ ನದಿಯಿಂದ ಸರ್ಕಾರಿ ಆಸ್ಪತ್ರೆಗೆ ಬರುವವರು ಗುಡ್ಡ ಹತ್ತಿ ಬರಬೇಕಿತ್ತು. ಆದ್ರೆ ಭಾಸ್ಕರ್ ಲಯನ್ಸ್ ಕ್ಲಬ್ ವತಿಯಿಂದ ಸುಂದರವಾದ ಮೆಟ್ಟಿಲುಗಳನ್ನು ಕಟ್ಟಿಸಿದ್ದರು. ಅದಿಲ್ಲ ಇದಿಲ್ಲ ಅನ್ನೋದ್ರ ನಡುವೆಯೇ ಇದು ಇದೆಯಲ್ಲ ಅನ್ನೋ ಹಾಗೇ ಮಾಡಿದ ಪರಿಶ್ರಮಿ ಡಾ.ಟಿ.ಎನ್.ಭಾಸ್ಕರ್. ದಣಿವರಿಯದೇ ದುಡಿದ ಡಾ.ಟಿ.ಎನ್.ಭಾಸ್ಕರ್ ನಿಜಕ್ಕೂ ವೈದ್ಯಲೋಕದ ಯುಗಪುರುಷ ಅಂದರೆ ತಪ್ಪಾಗಲಾರದು.
ಹಂಚಿನ ಮಾಡಿನ ಕ್ವಾಟರ್ಸ್ನಲ್ಲಿ ಉಳಿದುಕೊಂಡು, ಒಟಿಟಿಗಳಿಲ್ಲದೇ ಅನುಪಮ ಸೇವೆ ಸಲ್ಲಿಸಿದವರು ಡಾ.ಟಿ.ಎನ್. ಭಾಸ್ಕರ್. ಇದಕ್ಕೆ ಜೊತೆಯಾಗಿ ಅವರ ಪತ್ನಿ ಶೈಲಾ, ರೋಗಿಗಳ ಸೇವೆಗೆ ಭಾಸ್ಕರ್ ಅವರು ಇಡೀ ದಿನ ಮೀಸಲಾಗಿಡುವಂತೆ ಸಹಕರಿಸಿದ್ದಾರೆ. ಭಾಸ್ಕರ್ ಅವರ ಮಗ, ಮಗಳು, ಅಳಿಯ,ಮೊಮ್ಮಕ್ಕಳು ಎಲ್ಲರೂ ವೈದ್ಯರಾಗಿದ್ದಾರೆ. ಡಾ.ಟಿ.ಎನ್.ಭಾಸ್ಕರ್ ಇಹಲೋಕ ತ್ಯಜಿಸಿದ್ದು, ಅವರು ಮಾಡಿದ ಸೇವೆ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯಲಿದೆ.