Slide
Slide
Slide
previous arrow
next arrow

ಜಿಲ್ಲಾ ಕಸಾಪ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ತೆರೆ

300x250 AD

ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಅನುಪಸ್ಥಿತಿ | ತಾಲೂಕಿಗೊಂದು ಸಾಹಿತ್ಯ ಭವನ ನಿರ್ಮಾಣಕ್ಕೆ ಒತ್ತಾಯ

ಹೊನ್ನಾವರ: ಸಾಹಿತ್ಯ ಸಮ್ಮೇಳನದ ಜೊತೆಗೆ ಸಾಂಸ್ಕೃತಿಕ, ಸಾಹಿತ್ಯಿಕ, ಸ್ವಾತಂತ್ರ್ಯ ಹೋರಾಟದ ಕಥೆಗಳು ಯುವ ಪೀಳಿಗೆಗೆ ದಾಟಬೇಕು. ಕರ್ನಾಟಕದ ಮೂರು ನೆಲಗಳು ಕನ್ನಡವನ್ನು ಗಟ್ಟಿಗೊಳಿಸಿದೆ. ಅವುಗಳೆಂದರೆ ಮಂಡ್ಯ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆ ಎಂದು ಮೈಸೂರಿನ ಹಿರಿಯ ಸಾಹಿತಿ ಡಾ. ಜಗದೀಶ ಕೊಪ್ಪ ಹೇಳಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಪಟ್ಟಣದ ಮೂಡಗಣಪತಿ ದೇವಸ್ಥಾನದ ರಾಣಿ ಚೆನ್ನಭೈರಾ ದೇವಿ ಆವರಣದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ವೇದಿಕೆಯಲ್ಲಿ ಗುರುವಾರ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದರು.

ಧರ್ಮ ಎಂದರೆ ಒಂದೇ ಧರ್ಮ. ದೇವರು ಎಂದರೆ ಒಂದೇ ದೇವರು ಎಂಬ ಸ್ಥಿತಿಯಲ್ಲಿ ನಾವು ಇರುವಾಗ, ಗಿಡಗಳಲ್ಲಿ, ಪರಿಸರದಲ್ಲಿ, ಕಲ್ಲುಗಳಲ್ಲಿ ದೇವರು ಕಂಡ ಜನಪದರ ಆದರ್ಶವನ್ನು ಮೂಡಿಸುವ ಸಾಹಿತ್ಯ ಮತ್ತು ಶಿಕ್ಷಣ ನಮ್ಮದಾಗಬೇಕಾಗಿದೆ. ದಯವೇ ಧರ್ಮದ ಮೂಲ ಎಂದ ಬಸವಣ್ಣ, ಆಸೆಯೇ ದುಃಖಕ್ಕೆ ಕಾರಣ ಎಂದ ಬುದ್ದ ಇವರುಗಳು ಮನಕುಲಕ್ಕೆ ನೀಡಿದ ಸಂದೇಶಕ್ಕೂ ಜನಪದರ ಧಾರ್ಮಿಕ ಕುರಿತಾದ ನಿಲುವಿಗೂ ಇಂದಿನ ಕೆಲ ಪೀಠಗಳನ್ನು ಏರಿ ಧರ್ಮ ಬೋಧನೆ ಮಾಡುವವರ ಬೋಧನೆಗೂ ಇರುವ ವ್ಯತ್ಯಾಸ ಗುರುತಿಸಬೇಕಿದೆ. ಮನುಕುಲವನ್ನು ಪ್ರೀತಿಸುವ ಏಳಿಗೆ ಬಯಸುವ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕಿದೆ.

ಕನ್ನಡ ಅನ್ನಕೊಡುತ್ತದೆಯೋ ಇಲ್ಲವೋ ಅನ್ನುವುದು ಗೌಣ. ಆದರೆ ಕನ್ನಡ ನಮ್ಮನ್ನು ಅಪ್ಪಟ ಮನುಷ್ಯನಾಗಿ ಬದುಕುವುದನ್ನು ಕಲಿಸುವ ಭಾಷೆ. ಮಕ್ಕಳಿಗೆ ಕನ್ನಡ ಕಲಿಸಿ. ಸಾಹಿತ್ಯ ಸಮ್ಮೇಳನಗಳು ಎಷ್ಟೇ ಅದ್ದೂರಿಯಾಗಿ ನಡೆಯಲಿ. ಆದರೆ ಅಲ್ಲಿ ಕನ್ನಡದ ಮರು ಆಲೋಚನೆ ಆಗಬೇಕು. ಇಂಗ್ಲೀಷ ಕಲಿತರೆ ಪ್ರತಿಭಾವಂತರೆನ್ನುವುದು ಸುಳ್ಳು. ಕನ್ನಡ ಘನತೆಯ ಭಾಷೆ. ಕನ್ನಡ ಸಾಹಿತ್ಯ ಸಮ್ಮೇಳನದ ಜೊತೆಗೆ ಶಿಬಿರಗಳನ್ನು ಏರ್ಪಡಿಸಬೇಕು. ಪ್ರೌಢ ಶಾಲಾ ಶಿಕ್ಷಕರ ಮನವೊಲಿಸಿ. ಸಾಹಿತ್ಯ ಸಮ್ಮೇಳನಗಳ ಮೂಲಕ ನಮ್ಮ ನೆಲದ ಸಾಂಸ್ಕೃತಿಕ, ಸಾಹಿತ್ಯ, ಸ್ವಾತಂತ್ರ‍್ಯ ಹೋರಾಟದ ಇತಿಹಾಸಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸ ಆಗಬೇಕು ಎಂದರು.

ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಉ.ಕ ಜಿಲ್ಲೆ ಕನ್ನಡಕ್ಕೆ ಬೇಕಾದಷ್ಟು ಕೊಡುಗೆ ಕೊಟ್ಟಿದೆ. ಚಿಟ್ಟಾಣಿ ರಾಮಚಂದ್ರ ಹೆಗಡೆ, ಸುಕ್ರಿ ಗೌಡ, ತುಳಸಿ ಗೌಡ ಪ್ರಶಸ್ತಿ ಪಡೆದು ನಮ್ಮ ಜಿಲ್ಲೆಯ ಹೆಸರು ಎತ್ತರಿಸಿದ್ದಾರೆ ಎಂದರು.

ಸಂಕಲ್ಪದ ಪ್ರಮೋದ ಹೆಗಡೆ ಮಾತನಾಡಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠರು, ಎಲ್ಲಾ ಶಾಸಕರು, ಮಂತ್ರಿಗಳು ಎಲ್ಲರೂ ಸಭೆಗೆ ಬರಬೇಕು. ಹದಿಹರೆಯದ ಯುವಕರು ಪಾಲ್ಗೊಳ್ಳಬೇಕು ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಜಾಗೃತ ವಹಿಸಿ ಎಂದರು.

ಸರ್ಕಾರಿ ನೌಕರರ್ ಸಂಘದ ಅಧ್ಯಕ್ಷ ರಾಜ್ ಕುಮಾರ್ ನಾಯ್ಕ, ತಾ.ಪಂ. ಅಧಿಕಾರಿ ಸುರೇಶ್ ನಾಯ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಾನಪದ ಸಂಗ್ರಾಹಕಿ ಶಾಂತಿ ನಾಯಕ ಹೊನ್ನಾವರ, ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಮೋದ ಹೆಗಡೆ ಯಲ್ಲಾಪುರ, ಶಿಕ್ಷಣ ವಿಭಾಗದಲ್ಲಿ ಏಮ್ ಖಲೀಲುಲ್ಲ ಕಾರವಾರ, ಅಂಕೋಲಾದ ಮಹಾಂತೇಶ್ ರೇವಡಿ, ಭಟ್ಕಳದ ಕೆ. ಸುಲೇಮಾನ್ ಮಹಮ್ಮದ ಸಾಬ, ಮುಂಡಗೋಡಿನ ವಿಶ್ವನಾಥ ಹಿರೇಮಠ, ಅಂಕೋಲಾದ ಶ್ಯಾಮ ಸುಂದರ ಗೌಡ, ಲಕ್ಷ್ಮೀಬಾಯಿ ಎಮ್. ಕರ್ಕಿ, ಪ್ರೋ.ಎಮ್. ಆರ್. ನಾಯ್ಕ ಕುಮಟಾ, ರಮೇಶ ಗುನಗಿ ಕಾರವಾರ, ಪಾಂಡುರಂಗ ನಾಯ್ಕ ಕುಮಟಾ, ಪರುಶುರಾಮ ಎಚ್ ಪಿ. ದಾಂಡೇಲಿ, ಶಿವಾನಂದ ಭಟ್ಕಳ, ಮಹೇಶ ಕೆ. ಶಿರಸಿ, ಪಿ.ಬಿ. ಹೊಸೂರ ಸಿದ್ದಾಪುರ, ಕೃಷ್ಣಭಟ್ ನಾಯ್ಕನಕೆರೆ, ಕೃಷ್ಣ ಪಾಟೀಲ್ ದಾಂಡೇಲಿ, ಉಮೇಶ ಬಾ ವೇಲಿಪ ಜೋಯಿಡಾ, ಗಣಪತಿ ಹೆಗಡೆ ಹಂದಿಮೂಲೆ ಇವರನ್ನು ಕ.ಸಾ.ಪ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸರ್ವಾಧ್ಯಕ್ಷ ಶ್ರೀಪಾದ ಶೆಟ್ಟಿ ಮಾತನಾಡಿ ನನ್ನೂರಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಎಲ್ಲಾ ಗುಡಿ, ದರ್ಗಾ, ಚರ್ಚ್ ಗಳ ದೇವರುಗಳ ಆಶೀರ್ವಾದ ಕನ್ನಡ ಕಟ್ಟಾಳುಗಳ ಪಾಲ್ಗೊಳ್ಳುವಿಕೆಯಿಂದ ಮಿತ್ರರ ಸಹಕಾರದಿಂದ ಯಶಸ್ವಿಯಾಗಿದೆ ಎಂದರು.
ಕ.ಸಾ.ಪ ಜಿಲ್ಲಾಧ್ಯಕ್ಷ ಬಿ ಎನ್ ವಾಸರೆ ಅಧ್ಯಕ್ಷೀಯ ಮಾತುಗಳನ್ನಾಡಿದರು.

ಬದುಕು ಮತ್ತು ಬರಹ ಇಂದಿನ ದಿನಗಳಲ್ಲಿ ಒಟ್ಟೊಟ್ಟಿಗೆ ಹೋಗಲು ಸಾಧ್ಯವಿಲ್ಲ : ಗಂಗಾಧರ ಹಿರೇಗುತ್ತಿ

300x250 AD

ನಮ್ಮ ಬಗ್ಗೆ ನಾವು ಹೊಗಳಿಕೊಳ್ಳುವುದನ್ನು ಬಿಡಬೇಕು. ಬದುಕನ್ನು ಎತ್ತರಿಸಲು ಪುಸ್ತಕ, ಪತ್ರಿಕೆ ಓದಬೇಕು. ಮಾತನಾಡುವುದು ಒಂದು ತೀಟೆ. ಕಡಿಮೆ ಮಾತು ಹೆಚ್ಚು ಕೃತಿ ನಮ್ಮ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ. ಬದುಕು ಮತ್ತು ಬರಹ ಇಂದಿನ ದಿನಗಳಲ್ಲಿ ಒಟ್ಟೊಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿಯವರು ಹೇಳಿದರು.

ಎರಡು ದಿನಗಳಿಂದಲೂ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬರಲಿಲ್ಲ. ಅದನ್ನು ಖಂಡಿಸಿ ಠರಾವು ಮಾಡಿ, ಧ್ವನಿ ಎತ್ತಿ. ಮನುಷ್ಯನಲ್ಲಿ ಒಳಗಿನ ದ್ರವ ಇಲ್ಲದೇ ಇದ್ದಾಗ ಜನರಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಾನೆ. ಇಂದಿನ ಅಧ್ಯಕ್ಷರು ಅಧಿಕಾರ ಅವಧಿ 2 ವರ್ಷ ಹೆಚ್ಚಿಸಿಕೊಂಡರೂ ಈಗಿನ ಅಧ್ಯಕ್ಷರು ಕ್ಯಾಬಿನೆಟ್ ಸೌಕರ್ಯವನ್ನು ಪಡೆದುಕೊಂಡರು. ಎಲ್ಲರೂ ಒಂದಾಗಿ ಕನ್ನಡ ಕಟ್ಟುವ ಕೆಲಸ ಆಗಬೇಕಿದೆ ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯ :

• ಶಿರಸಿಯಲ್ಲಿ ಈಗಾಗಲೇ ಘೋಷಣೆಯಾಗಿರುವ ಪರಿಸರ ವಿಶ್ವವಿದ್ಯಾಲಯವನ್ನು ಶೀಘ್ರ ಸ್ಥಾಪಿಸುವುದರ ಜೊತೆಗೆ ಜಿಲ್ಲೆಗೊಂದು ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪಿಸಲು ಒತ್ತಾಯ.

• ಜಿಲ್ಲೆಯಲ್ಲಿ ಈಗಾಗಲೇ ಬೇಡಿಕೆ ಇರುವ ಹೋರಾಟದ ಧ್ವನಿಯೂ ಆಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಜಿಲ್ಲಾ ಸಾಹಿತ್ಯ ಪರಿಷತ್ತು ಸಹ ಒತ್ತಾಯಿಸುತ್ತದೆ.

• ಹೊನ್ನಾವರದಲ್ಲಿ ರಾಣಿ ಚೆನ್ನ ಭೈರಾ ದೇವಿ ಥೀಮ್ ಪಾರ್ಕ್ ಜೊತೆಗೆ ಅಂಕೋಲೆಯಲ್ಲಿ ಡಾ. ದಿನಕರ ದೇಸಾಯಿ ಥೀಮ್ ಪಾರ್ಕ್ ಸ್ಥಾಪನೆಗೆ ಒತ್ತಾಯ.

• ಘೋಷಿತ ತಾಳಗುಪ್ಪ-ಹುಬ್ಬಳ್ಳಿ ರೈಲ್ವೆ ಮಾರ್ಗ ಹಾಗೂ ಅಂಕೋಲಾ-ಹುಬ್ಬಳ್ಳಿ ರೈಲ್ವೆ ಮಾರ್ಗ ಶೀಘ್ರ ಪ್ರಾರಂಭಿಸಲು ಒತ್ತಾಯ.

• ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅಧಿಕೃತ ಪ್ರವಾಸೋದ್ಯಮ ಮಾನ್ಯತೆ ಸಿಗಬೇಕು.

• ಉತ್ತರ ಕನ್ನಡ ಜಿಲ್ಲೆಯ ಪ್ರತಿ ತಾಲೂಕಿಗೊಂದು ಸಾಹಿತ್ಯ ಭವನ ನಿರ್ಮಿಸಲು ಸರ್ಕಾರಕ್ಕೆ ಒತ್ತಾಯ.

• ಸಮ್ಮೇಳನದ ಯಶಸ್ವಿಗೆ ಕಾರಣಿಕರ್ತರಾದ ಸಮ್ಮೇಳನದ ಸ್ವಾಗತ ಸಮಿತಿ ಹಾಗೂ ಸಮ್ಮೇಳನದ ಯಶಸ್ಸಿಗೆ ಜೊತೆಯಾದ ಎಲ್ಲರಿಗೂ ಜಿಲ್ಲಾ ಸಾಹಿತ್ಯ ಪರಿಷತ್ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತದೆ.

Share This
300x250 AD
300x250 AD
300x250 AD
Back to top