ಹೊನ್ನಾವರ : ಕಳೆದ ಕೆಲವು ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದ ಬಿಜೆಪಿಯ ಪೈಯರ್ ಬ್ರ್ಯಾಂಡ್ ಸಂಸದ ಅನಂತಕುಮಾರ ಮತ್ತೆ ಗುಡುಗಿದ್ದಾರೆ. ನೇರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದವೇ ಹೇಳಿಕೆ ಕೊಡುವುದರ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ಅನಂತಕುಮಾರ್ ಹೆಗಡೆ ಮತ್ತೆ ಚುನಾವಣಾ ರಾಜಕೀಯಕ್ಕೆ ಧುಮುಕುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ.
ಭಾರತೀಯ ಜನತಾ ಪಕ್ಷಕ್ಕೆ ಜಿಲ್ಲೆಯ ಮಟ್ಟಿಗೆ ಸಂಸದ ಅನಂತಕುಮಾರ ಹೆಗಡೆ ಭೀಮ ಬಲ. ಅವರ ಹೇಳಿಕೆಯೇ ಬಿಜೆಪಿಗೆ ಬಲ ತಂದುಕೊಡುತ್ತದೆ. ಹೇಳಿ ಕೇಳಿ ಅವರು ಹಿಂದು ಹುಲಿ ಎಂದೇ ಖ್ಯಾತಿ ಪಡೆದವರು. ಅವರು ಸಕ್ರಿಯವಾಗಿ ಇರಲಿ ಬಿಡಲಿ, ಅವರ ಸಿದ್ಧಾಂತ ಒಪ್ಪಿ ಅವರನ್ನೇ ಅನುಸರಿಸುವ ಸಾವಿರಾರು ಅಭಿಮಾನಿಗಳು ಅವರ ಹಿಂದೆ ಇದ್ದಾರೆ. ಅವರು ಅಖಾಡಕ್ಕೆ ಇಳಿದರೆ ಮುಗಿದೇ ಹೋಯಿತು ಜೈ ಶ್ರೀರಾಮ್ ಎಂದು ಅವರ ಜೊತೆ ಹೆಜ್ಜೆ ಹಾಕಲು ಯುವ ಸಮುದಾಯ ಖಾತರದಿಂದ ಕಾಯುತ್ತಿರುತ್ತಾರೆ.
ಅನುಪಸ್ಥಿತಿ ಪಕ್ಷಕ್ಕೆ ಹಿನ್ನಡೆ :
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಪ್ರಚಾರದಿಂದ ದೂರವೇ ಉಳಿದಿದ್ದು, ಪಕ್ಷದ ಹಲವು ಅಭ್ಯರ್ಥಿ ಸೋಲಲು ಕಾರಣ ಅನುವ ವಿಶ್ಲೇಷಣೆ ನಡೆದಿತ್ತು. ಅದರ ಸಾಧ್ಯತೆಯನ್ನು ತಳ್ಳಿ ಹಾಕುವಂತಿರಲಿಲ್ಲ. ಸ್ಪರ್ಧೆ ಮಾಡಿದ ಅಭ್ಯರ್ಥಿಗಳು ಸಂಸದರು ಬರುತ್ತಾರೆ, ಬರುತ್ತಾರೆ ಅಂತಾ ಹೇಳೇ ಚುನಾವಣೆ ಮುಗಿಸಿದ್ದರು. ಸಂಸದರ ಮುನಿಸು ವಿಧಾನಸಭಾ ಚುನಾವಣೆಯ ಮೇಲೆ ಗಂಭೀರ ಪರಿಣಾಮ ಬೀರಿತ್ತು.
ಟಿಕೆಟ್ ಅಕಾಂಕ್ಷಿಗಳು ತಬ್ಬಿಬ್ಬು :
ಕಳೆದ ಐದು ವರ್ಷದಲ್ಲಿ ಸಂಸದರು ಸಕ್ರಿಯ ಓಡಾಟ ಮಾಡಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅಂಕೋಲಾಕ್ಕೆ ಬಂದಿದ್ದರೂ ಅಂದಿನ ಕಾರ್ಯಕ್ರಮಕ್ಕೆ ಹೋಗದೆ ಗೈರಾಗಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ಅನಂತಕುಮಾರ ಹೆಗಡೆ ಈ ಬಾರಿ ಚುನಾವಣೆ ನಿಲ್ಲುವುದಿಲ್ಲ. ಹೈಕಮಾಂಡ್ ಕೂಡ ಅಭ್ಯರ್ಥಿ ಬದಲಾವಣೆ ಮಾಡುತ್ತಾರೆ ಎಂದು ಭಾವಿಸಿ, ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ಇದರಲ್ಲಿ ಮಾಜಿ ಶಾಸಕರ, ಸಚಿವರ, ಉದ್ಯಮಿಗಳ ಹೀಗೆ ಹಲವರ ಹೆಸರು ಕೇಳಿ ಬಂದಿತ್ತು. ಇದೀಗ ಸಂಸದರು ಮತ್ತೆ ಧ್ವನಿ ಎತ್ತಿರುವುದರಿಂದ ಟಿಕೆಟ್ ಪ್ರಯತ್ನದಲ್ಲಿದ್ದವರು ತಬ್ಬಿಬ್ಬು ಗೊಂಡಿದ್ದಾರೆ. ಅನಂತಕುಮಾರ ಹೆಗಡೆ ನಿಲ್ಲುವುದೇ ಪಕ್ಕಾ ಆದಲ್ಲಿ, ಮತ್ತೆ ಒಂದೆರಡು ಹೇಳಿಕೆ ಅವರಿಂದ ಹೊರಬಿದ್ದಲ್ಲಿ, ಟಿಕೆಟ್ ನಿರೀಕ್ಷೆಯಲ್ಲಿದ್ದವರೆಲ್ಲ ಅಸ್ತ್ರ ಬದಿಗಿಟ್ಟು, ಅವರಿಗೆ ಜೈ ಎನ್ನುವ ಕಾಲ ಸನ್ನಿಹಿತ ವಾಗುವ ಸಾಧ್ಯತೆ ಹೆಚ್ಚಿದೆ.
ಟಿಕೆಟ್ ಸಲುವಾಗಿ ಬುಲಾವ್..?
ಕೆಲವು ದಿನದ ಹಿಂದೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಮೂವರೂ ಬಿಜೆಪಿ ನಾಯಕರು ಜೊತೆಗೂಡಿ ದೆಹಲಿಗೆ ತೆರಳಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯವೇ ಇಲ್ಲ ಅಂತಾ ಬಹುತೇಕ ರಾಜಕೀಯದಿಂದ ದೂರ ಉಳಿದಿದ್ದ ಅನಂತಕುಮಾರ್ ಹೆಗಡೆ ಮತ್ತೆ ಆ್ಯಕ್ಟಿವ್ ಆಗಿ ದೆಹಲಿಗೆ ತೆರಳಿದ್ದು ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಬಹುಶಃ ಟಿಕೆಟ್ ಫಿಕ್ಸ್ ಮಾಡಲೆಂದೇ ಮತ್ತೆ ದೆಹಲಿಗೆ ಕರೆಸಿಕೊಂಡಿತ್ತಾ ಹೈಕಮಾಂಡ್..? ಗೊತ್ತಿಲ್ಲ ಆದರೆ ಹಿಂದು ಹುಲಿ ಬಿಜೆಪಿಯ ಬಾವುಟ ಎತ್ತಿ ಹಿಡಿಯಲು ಸನ್ನದ್ಧರಾಗುವ ಸಾಧ್ಯತೆ ನಿಚ್ಚಳವಾದಂತಿದೆ ಎನ್ನುವ ಸುದ್ದಿ ಹಬ್ಬಿತ್ತು.
ಸಂಸದರ ಬಣ ಅಂದುಕೊಂಡತ್ತಿಲ್ಲ :
ಇಷ್ಟು ವರ್ಷದ ರಾಜಕೀಯ ಬೆಳವಣಿಗೆಯೇ ಬೇರೆ. ಈಗಿನ ಪ್ರಸ್ತುತ ಪರಿಸ್ಥಿತಿಯೇ ಬೇರೆ. ಬಿಜೆಪಿ ಪಕ್ಷದ ಒಳಗೆ ಎಲ್ಲವೂ ಸರಿ ಇಲ್ಲ. ಅಮಾನತ್, ವಾಪಾಸ್ ಅಂತ ರಗಳೆ ನಡೆಯುತ್ತಲೇ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತವರು ಇನ್ನೂ ಸಮಾಧಾನಗೊಂಡಿಲ್ಲ. ಸಂಸದರು ಪ್ರಚಾರಕ್ಕೆ ಬಂದಿಲ್ಲ ಎನ್ನುವ ಸಿಟ್ಟು ಒಳಗೊಳಗೇ ಇದೆ. ಇದು ಬಣ ರಾಜಕೀಯ ಎನ್ನುವುದು ಎಲ್ಲರಿಗೂ ಗೊತ್ತಿದ್ದ ವಿಚಾರ. ಅವರು ಮನಸ್ಸುಕೊಟ್ಟು ಕೆಲಸ ಮಾಡದೇ ಇದ್ದರೆ, ಗೆಲುವು ಅಷ್ಟು ಸುಲಭವಲ್ಲ. ಅದರ ಜೊತೆ ಸಂಸದರು ಐದು ವರ್ಷ ಓಡಾಡದೇ ಇರುವುದು ಸ್ವಲ್ಪ ಮಟ್ಟಿನ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇದೆ.
ಬಿಜೆಪಿ- ಜೆಡಿಎಸ್ ಮೈತ್ರಿ :
ರಾಜ್ಯ ಮಟ್ಟದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ವಿದ್ಯಮಾನ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಚಲನ ಮೂಡಿಸಿದ್ದರೆ, ಇತ್ತ ಜಿಲ್ಲೆಯಲ್ಲಿಯೂ ಈ ವಿಷಯ ಒಂದಷ್ಟು ಕುತೂಹಲಕ್ಕೆ ಕಾರಣವಾಗಿದೆ. 2019 ರ ಚುನಾವಣೆಯಲ್ಲಿ ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಇಂತಹದ್ದೇ ಮೈತ್ರಿ ಆಗಿತ್ತಾದರೂ, ಅದು ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಎಲ್ಲಿಯೂ ಫಲ ಕೊಟ್ಟಿರಲಿಲ್ಲ. ಜಿಲ್ಲೆಯಲ್ಲಿ ಆ ಮೈತ್ರಿಕೂಟದಿಂದ ಹುರಿಯಾಳಾಗಿದ್ದ ಜೆಡಿಎಸ್ ಅಭ್ಯರ್ಥಿ 4 ಲಕ್ಷ ಮತಗಳ ಬೃಹತ್ ಅಂತರದಿಂದ ಹೀನಾಯ ಸೋಲು ಕಾಣುವಂತಾಗಿತ್ತು. ಕೊನೆಗಳಿಗೆ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಆಗಿದ್ದು ಮತ್ತು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉತ್ಸಾಹ ಕಳೆದುಕೊಂಡದ್ದು ಕೂಡ ಕಾರಣವಾಗಿತ್ತು. ಈ ಪಕ್ಷಗಳ ವಿರುದ್ಧ ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು. ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಹೋಲಿಸಿದರೆ, ಜೆಡಿಎಸ್ ಪರಿಸ್ಥಿತಿ ಕಳೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿಯೇ ಹದಗೆಟ್ಟಿದೆ. ಜಿಲ್ಲೆಯಲ್ಲಿ ಒಂದು ಸ್ಥಾನ ಕೂಡ ಗೆಲ್ಲದ ಜೆಡಿಎಸ್ ಆರು ಕ್ಷೇತ್ರಗಳಲ್ಲಿ ಬಹುತೇಕ ಯಾವುದರಲ್ಲೂ ಪ್ರಬಲ ಪೈಪೋಟಿ ಕೂಡ ನೀಡಿಲ್ಲ. ಕುಮಟಾ ಕ್ಷೇತ್ರದಲ್ಲಿ ಎರಡನೆಯ ಸ್ಥಾನದಲ್ಲಿ ಇದ್ದರೂ ಅದಕ್ಕೆ ಅಭ್ಯರ್ಥಿ ಮತ್ತು ಕಾಂಗ್ರೆಸ್ ಒಳ ಜಗಳವೇ ಕಾರಣ ಆಗಿದೆ ಎನ್ನುವುದು ಗಮನಾರ್ಹವಾಗಿದೆ.
ಕಾಂಗ್ರೆಸ್ ತಂತ್ರ ಬದಲಿಸುವುದೇ ?
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದರೂ ಕಾಂಗ್ರೆಸ್ ಆ ಮಟ್ಟಿನ ಸಿದ್ಧತೆ ಮಾಡಿಕೊಂಡಂತೆ ಕಂಡು ಬಂದಿಲ್ಲ. ಗೆದ್ದ ಶಾಸಕರು ಗೆಲುವಿನ ಹುಮ್ಮಸ್ಸು ಮತ್ತು ಅಧಿಕಾರದ ಉತ್ಸಾಹದಲ್ಲಿ ಪಕ್ಷಕ್ಕಿಂತ ತಮ್ಮದೇ ಆದ ನಿಲುವಿನಲ್ಲಿ ಓಡಾಟ ಮಾಡುವಂತೆ ಕಂಡುಬರುತ್ತಿದೆ. ಚುನಾವಣೆ ವೀಕ್ಷಕರಾಗಿದ್ದ ಎಚ್. ಕೆ. ಪಾಟೀಲ್ ಆಗಮಿಸಿದ ಪ್ರಥಮ ಸಭೆಗೆ ಉಸ್ತುವಾರಿ ಸಚಿವರು ಗೈರಾಗಿದ್ದರು. ಒಟ್ಟಾರೆ ಪಕ್ಷದ ಒಳಗೆ ಸರಿ ಇಲ್ಲ ಎನ್ನುವುದನ್ನು ಬಿಜೆಪಿ.ಯವರು ಅರಿತುಕೊಂಡಿದ್ದಾರೆ.
ಹೀಗಿದ್ದರು ಕೂಡ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಗೆಲ್ಲಲೇ ಬೇಕಾಗಿದೆ. ಗೆಲ್ಲಲೇ ಬೇಕು ಎನ್ನುವ ರಣತಂತ್ರ ಕೂಡ ಒಳಗೊಳಗೇ ಹೂಡುತ್ತಿದ್ದಾರೆ. ನಾಯಕರು ಈಗಾಗಲೇ ಈ ಬಾರಿ ಗೆಲ್ಲುತ್ತೇವೆ ಎನ್ನುವ ಹೇಳಿಕೆ ನೀಡಿದ್ದಾರೆ. ಅಭ್ಯರ್ಥಿ ಆಯ್ಕೆ ಆಗುವ ಮೊದಲೇ ಗೆಲುವಿನ ಅತೀ ಆತ್ಮವಿಶ್ವಾಸದಲ್ಲಿದ್ದಾರೆ.
ಅಭ್ಯರ್ಥಿಯೇ ಅಂತಿಮ:
ಕಾಂಗ್ರೆಸ್ ಕ್ಷೇತ್ರದಲ್ಲಿ ಹೆಚ್ಚು ಮತದಾರರು ಇರುವ ಸಮುದಾಯದ ಅಭ್ಯರ್ಥಿ ನಿಲ್ಲಿಸುವ ಆಲೋಚನೆಯಲ್ಲಿದ್ದಂತಿದೆ. ಮರಾಠ ಮತ್ತು ನಾಮಧಾರಿ ಸಮಾಜದ ಅಭ್ಯರ್ಥಿ ನಿಲ್ಲಿಸಿದರೆ ಹೇಗೆ, ಇಲ್ಲ ಮಹಿಳಾ ಅಭ್ಯರ್ಥಿ ಕಣಕ್ಕೆ ಇಳಿಸಿದರೆ ಹೇಗೆ ಎನ್ನುವ ಚರ್ಚೆ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದೀಗ ಅನಂತಕುಮಾರ ಹೆಗಡೆ ಮತ್ತೆ ಅಖಾಡಕ್ಕೆ ಇಳಿದರೆ ಕಾಂಗ್ರೆಸ್ ಕೂಡ ದೊಡ್ಡ ಸಮುದಾಯದ ಜೊತೆಗೆ ಹಿಂದುತ್ವದ ಹಿನ್ನಲೆ ಇರುವ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುವ ಅನಿವಾರ್ಯ ಪರಿಸ್ಥಿತಿ ಉಂಟಾಗಲಿದೆ. ಕಳೆದ ಐದು ವರ್ಷ ಸಂಸದರು ಕೆಲಸ ಮಾಡದೇ ಇರುವುದು, ಜನರಿಗೆ ಸಿಗದೇ ಇರುವುದು ಹೀಗೆ ಹಲವು ಕಾರಣವನ್ನು ಬಳಸಿಕೊಳ್ಳುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಆಡಳಿತದಲ್ಲಿರುವುದು ಅನುಕೂಲ ಉಂಟುಮಾಡಲಿದೆ. ಆದರೆ ವಿಧಾನಸಭಾ ಚುನಾವಣೆಗೆ ಬಂದಂತಹ ಮತ ಲೋಕಸಭಾ ಚುನಾವಣೆಗೆ ಬರುವ ಸಾಧ್ಯತೆ ತೀರಾ ಕಡಿಮೆ ಇದೆ. ಗ್ಯಾರಂಟಿಯಿಂದ ಮತ ಬರುತ್ತದೆ ಅಂದುಕೊಂಡರೆ, ಯುವ ಸಮುದಾಯ ಬಿಜೆಪಿಗೆ ಜೈ ಎನ್ನುವುದು ಪ್ರತಿ ಚುನಾವಣೆಯ ರೂಢಿ ಆಗಿದೆ.
ಪರೇಶ ಮೇಸ್ತ ಸಾವಿಗೆ ನ್ಯಾಯ; ಸಮರ್ಥನೆ ಹೇಗೆ..?
ಕಳೆದ ಏಳು ವರ್ಷದ ಹಿಂದೆ ದೇಶ ಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಹೊನ್ನಾವರದ ಯುವಕ ಪರೇಶ್ ಮೇಸ್ತ ಮೃತದೇಹ ಪಟ್ಟಣದ ಶೆಟ್ಟಿ ಕೆರೆಯಲ್ಲಿ ಸಿಕ್ಕಿತ್ತು. ನಂತರ ನಡೆದ ಮೆರವಣಿಗೆಯಲ್ಲಿ ಸಂಸದ ಅನಂತಕುಮಾರ ಹೆಗಡೆ ದೆಹಲಿಯಿಂದ ಬಂದು ನೆಲಕ್ಕೆ ಬಿದ್ದಿರುವ ಹನಿ ಹನಿ ರಕ್ತಕ್ಕೂ ನ್ಯಾಯ ಕೊಡಿಸುವುದಾಗಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಬಾರಿ ಸಂಚಲನ ಮೂಡಿಸಿತ್ತು. ಈಗ ಅದೇ ಹೇಳಿಕೆ ಚುನಾವಣೆ ಎದುರಲ್ಲಿ ಅನಂತಕುಮಾರ್ ಹೆಗಡೆಯನ್ನು ಕಾಡುವ ಸಾಧ್ಯತೆ ಹೆಚ್ಚಿದೆ.
ಅವರು ಆ ಹೇಳಿಕೆ ಕೊಟ್ಟ ನಂತರದ ಮುಂದಿನ ದಿನದಲ್ಲಿ ಪರೇಶ್ ಮೇಸ್ತ ಸಾವಿಗೆ ಸಂಬಂಧಪಟ್ಟಂತೆ ಒಂದೇ ಒಂದು ಹೇಳಿಕೆ ಕೊಟ್ಟಿಲ್ಲ. ಪರೇಶ್ ಮನೆಗೂ ಭೇಟಿ ನೀಡಿರಲಿಲ್ಲ. ಸಿಬಿಐ ತನಿಖೆ ಕೂಡ ಸಹಜ ಸಾವು ಎಂದು ವರದಿ ನೀಡಿತ್ತು. ಪರೇಶ್ ತಂದೆ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಅಂದಿನ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಪತ್ರಿಕಾ ಹೇಳಿಕೆ ನೀಡಿದ್ದರೆ, ಪರೇಶ್ ತಂದೆ ಮರು ತನಿಖೆಗೆ ನ್ಯಾಯಾಲಯದಲ್ಲಿ ಮನವಿ ನೀಡಿದ್ದರು.
ಅನಂತಕುಮಾರ ಹೆಗಡೆ ಅಂದು ನೀಡಿದ ಹೇಳಿಕೆಯನ್ನು ಬಿಜೆಪಿ ಹೇಗೆ ಸಮರ್ಥನೆ ಮಾಡಿಕೊಳ್ಳಲಿದೆ. ಅದರ ಜೊತೆ ಅನಂತಕುಮಾರ ಹೆಗಡೆ ಅಭ್ಯರ್ಥಿ ಆಗಲಿ ಎಂದು ಒತ್ತಾಯ ಮಾಡುವವರು ಇಷ್ಟು ವರ್ಷದಲ್ಲಿ ಒಂದು ಬಾರಿಯೂ ಪರೇಶ್ ಮೇಸ್ತ ವಿಷಯ ಸಂಸದರ ಗಮನಕ್ಕೆ ಯಾಕೆ ತಂದಿಲ್ಲ. ಸಾವನ್ನು ರಾಜಕೀಯಕ್ಕೆ ಬಳಸಿಕೊಂಡರೆ ಎನ್ನುವ ಪ್ರಶ್ನೆ ಹುಟ್ಟು ಹಾಕಲಿದೆ. ಇದೆ ವಿಷಯ ವಿರೋಧಿಗಳಿಗೆ ಪ್ರಚಾರದ ಸರಕು ಆಗಲಿದೆ. ಕಾಂಗ್ರೆಸ್ ಕೂಡ ಇದೆ ವಿಚಾರ ಮುಂದಿಟ್ಟು ಪ್ರಚಾರ ಗಿಟ್ಟಿಸಿಕೊಳ್ಳಲು ದಾರಿ ಸಿಕ್ಕಿದಂತೆ ಆಗುತ್ತದೆ.