ಕುಮಟಾ: ಶಾಸಕ ದಿನಕರ ಶೆಟ್ಟಿ ಕಲವೆಯಲ್ಲಿ ಕುಮಟಾ ತಾಲೂಕು ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘದವರು ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದಿನಕರ ಶೆಟ್ಟಿ, ಬಹುತೇಕ ಗುಡ್ಡಗಾಡು ಪ್ರದೇಶದಲ್ಲಿ ವಾಸವಿರುವ ಕುಂಬ್ರಿ ಮರಾಠಿ ಸಮಾಜದವರು ಸ್ವಾಭಾವಿಕವಾಗಿ ಮುಗ್ಧರಾಗಿದ್ದಾರೆ. ನಗರ ಜೀವನದಿಂದ ದೂರದಲ್ಲಿ ಇದ್ದರೂ ಇಂದು ಮರಾಠಿ ಸಮಾಜದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ವಿಶೇಷ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಯಾರಿಗೂ ಕೆಡುಕನ್ನು ಬಯಸದ ಸಾಧು ಜನಾಂಗದವರಾಗಿರುವ ಮರಾಠಿಗಳು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಆಗಬೇಕಿದೆ. ಕುಂಬ್ರಿ ಮರಾಠಿ ಜನಾಂಗದವರು ಹೆಚ್ಚಾಗಿ ವಾಸ್ತವ್ಯವಿರುವ ಕುಮಟಾ ತಾಲೂಕಿನ ಯಲವಳ್ಳಿ, ನಾಗೂರು, ಶೇಡಿಗದ್ದೆ, ಯಾಣ, ಕಲವೆ, ಮೊರ್ಸೆ, ಬಂಗಣೆ, ಉಳ್ಳೂರುಮಠ ಗ್ರಾಮಗಳ ಅಭಿವೃದ್ಧಿಗಾಗಿ ನನ್ನ ಆಡಳಿತಾವಧಿಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರು ವನವಾಸಿಗಳ ಕಲ್ಯಾಣಕ್ಕಾಗಿ ತಮ್ಮನ್ನು ತೊಡಗಿಸಿಕೊಂಡ ವ್ಯಕ್ತಿಯಾಗಿದ್ದು ಇಂದು ವಿಧಾನ ಪರಿಷತ್ತಿನಲ್ಲಿ ವನವಾಸಿಗಳ ಧ್ವನಿಯಾಗಿದ್ದಾರೆ. ಇಂತಹ ನಿಸ್ವಾರ್ಥ ಸೇವಾ ಮನೋಭಾವದ ವ್ಯಕ್ತಿಯನ್ನು ಗುರುತಿಸಿ ಸೂಕ್ತ ಗೌರವವನ್ನು ನೀಡಿದ ಕೀರ್ತಿ ಭಾರತೀಯ ಜನತಾ ಪಾರ್ಟಿಗೆ ಸಲ್ಲುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಮರಾಠಿ, ತಾಲೂಕಾ ಅಧ್ಯಕ್ಷ ಪುರುಷೋತ್ತಮ ಮರಾಠಿ, ಗ್ರಾ. ಪಂ. ಮಾಜಿ ಅಧ್ಯಕ್ಷ ವಿನಾಯಕ ಭಟ್, ಉಪನ್ಯಾಸಕ ಈಶ್ವರ ಮರಾಠಿ, ಜಿಲ್ಲಾಸಮಿತಿ ಉಪಾಧ್ಯಕ್ಷ ವೆಂಕಟರಮಣ ಮರಾಠಿ, ಜಾತಿ ಗೌಡರಾದ ಕೃಷ್ಣ ಮರಾಠಿ, ತಾಲೂಕಾ ಗೌರವಾಧ್ಯಕ್ಷ ಶೇಷಾ ಮರಾಠಿ, ಗ್ರಾ. ಪಂ. ಸದಸ್ಯರುಗಳಾದ ತ್ರಿವೇಣಿ ಮರಾಠಿ, ಈಶ್ವರ ಒ. ಮರಾಠಿ, ಈಶ್ವರ ಮರಾಠಿ ಯಲವಳ್ಳಿ, ಅಬ್ದುಲ್ ಖಾದರ್ ಸಾಬ್, ವನವಾಸಿ ಕಲ್ಯಾಣ ಸಂಸ್ಥೆಯ ಜಿಲ್ಲಾ ಪ್ರಮುಖ ಶ್ರೀಧರ್ ಸಾಲೆಹಕ್ಕಲ್ ಹಾಗೂ ಇತರರು ಹಾಜರಿದ್ದರು.