ದಾಂಡೇಲಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಹಾಗೂ ಭಾರತಿ ನೃತ್ಯ ಕಲಾ ಕೇಂದ್ರ ಸಮಿತಿಯ ದಾಂಡೇಲಿ ಮತ್ತು ಹಳಿಯಾಳ ಶಾಖೆಗಳ ಸಹಯೋಗದೊಂದಿಗೆ ನಗರದ ಟಿಂಬರ್ ಡಿಪೋ ಹತ್ತಿರದಲ್ಲಿರುವ ಹಾರ್ನಬಿಲ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ನೃತ್ಯೋತ್ಸವ, ಭರತನಾಟ್ಯ ಕಾರ್ಯಕ್ರಮವು ಸಂಭ್ರಮ, ಸಡಗರದಿಂದ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿಯವರು ಕಲೆ, ಸಂಗೀತ, ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ವಿಭಿನ್ನವಾದ ಸಂಸ್ಕೃತಿ ಮತ್ತು ಆದರ್ಶ ಸಂಸ್ಕಾರವಿದೆ. ಭಾರತಿ ನೃತ್ಯ ಕಲಾ ಕೇಂದ್ರವು ಈ ಭಾಗದ ಮಕ್ಕಳ ಉಜ್ವಲ ಭವಿಷ್ಯಕ್ಕೆ ಮುನ್ನುಡಿಯಾಗುವ ನಿಟ್ಟಿನಲ್ಲಿ ನೃತ್ಯ ಕಲಾ ಕೇಂದ್ರವನ್ನು ಮುನ್ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ನ್ಯಾಯವಾದಿ ಎಂ.ಸಿ ಹೆಗಡೆ, ಸಹಕಾರಿ ದುರೀಣ ಸುಬ್ರಾಯ.ಎಂ.ದಾನಗೇರಿ, ಶಿಕ್ಷಕಿ ಸರಿತಾ ಶೆಟ್ಟಿ, ದೀಪಾಲಿ ಸಾಮಂತ್ ಭಾಗವಹಿಸಿ, ಭಾರತಿ ನೃತ್ಯ ಕಲಾ ಕೇಂದ್ರದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ನಗರಸಭೆಯ ಸದಸ್ಯರಾದ ಮೋಹನ್ ಹಲವಾಯಿ ಅವರು ಭರತ ನಾಟ್ಯಕ್ಕೆ ತನ್ನದೇ ಆದ ಮತ್ತು ಪರಂಪರೆ ಇದೆ. ಈ ದೇಶದ ಸಂಸ್ಕೃತಿ ಮತ್ತು ಸಂಸ್ಕಾರ ಹಾಗೂ ಆದರ್ಶ ನಡವಳಿಕೆಗಳು ಭರತ ನಾಟ್ಯ ಕಲೆಯಲ್ಲಿ ಅಡಕವಾಗಿದೆ. ಇಂತಹ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಭಾರತಿ ನೃತ್ಯ ಕಲಾ ಕೇಂದ್ರವು ಬಹುಮೂಲ್ಯ ಕೊಡುಗೆಯನ್ನು ನೀಡುತ್ತಿದೆ ಎಂದರು.
ಭಾರತಿ ನೃತ್ಯ ಕಲಾ ಕೇಂದ್ರ ಸಮಿತಿಯ ಅಧ್ಯಕ್ಷರಾದ ವಿ.ಟಿ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ಬೆಳೆದು ಬಂದ ಹಾದಿಯನ್ನು ವಿವರಿಸಿ ಸಂಸ್ಥೆಯ ಉನ್ನತಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ವಿವಿಧ ನೃತ್ಯ ಪರೀಕ್ಷೆಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯ್ತು. ಇದೇ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ದೀಪಾಲಿ ಸಾಮಂತ್ ದಂಪತಿಗಳನ್ನು ಸನ್ಮಾನಿಸಲಾಯ್ತು. ನೃತ್ಯ ಗುರು ಸುಮಾ ವೆಂಕಟ್ರಮಣ ಹೆಗಡೆ ದಂಪತಿಗಳನ್ನು ವಿದ್ಯಾರ್ಥಿಗಳ ಪರವಾಗಿ ಪಾಲಕರು ಗೌರವಪೂರ್ವಕವಾಗಿ ಸನ್ಮಾನಿಸಿದರು.
ನೃತ್ಯ ಗುರು ವಿದುಷಿ ಸುಮಾ ವೆಂಕಟ್ರಮಣ ಹೆಗಡೆ ಸ್ವಾಗತಿಸಿದರು. ಸೀತಾ ದಾನಗೇರಿ ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನೃತ್ಯೋತ್ಸವ ಶಾಸ್ತ್ರೀಯ ನೃತ್ಯಗಳ ಪ್ರದರ್ಶನ ಮತ್ತು ಭರತನಾಟ್ಯ ಕಾರ್ಯಕ್ರಮವು ಜರುಗಿತು.