ದಾಂಡೇಲಿ : ನಗರದ ಗಾಂಧಿನಗರದ ಕಂಜಾರಬಾಟ್’ನಲ್ಲಿ ನಿರ್ಮಾಣ ಹಂತದ ಮನೆಯ ಮೇಲ್ಗಡೆ ನೀರಿನ ಟ್ಯಾಂಕಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾದ ಬಾಲಕನ ಮರಣೋತ್ತರ ಪರೀಕ್ಷಾ ವರದಿಗೆ ಮತ್ತು ಶೀಘ್ರ ತನಿಖೆಗೆ ಮೃತ ಬಾಲಕನ ಕುಟುಂಬಸ್ಥರು ಇಂದು ಶನಿವಾರ ನಗರದಲ್ಲಿ ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ.
ಕಂಜಾರಬಾಟ್ ನಿವಾಸಿ ಸುನೀಲ್ ಕಂಜಾರಬಾಟ್ ಅವರ 5 ವರ್ಷ 8 ತಿಂಗಳು ವಯಸ್ಸಿನ ಮಗ ಯಶ್ ಸುನೀಲ್ ಕಂಜಾರಬಾಟ್ ಎಂಬಾತನು ಅನುಮಾನಾಸ್ಪದವಾಗಿ ಮೃತಪಟ್ಟಿದ್ದನು. ಈ ಬಗ್ಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೃತ ಬಾಲಕನ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ಈವರೆಗೆ ಮರಣೋತ್ತರ ಪರೀಕ್ಷಾ ವರದಿ ಬಂದಿರುವುದಿಲ್ಲ. ಮರಣೋತ್ತರ ಪರೀಕ್ಷೆ ವರದಿಯ ಬಗ್ಗೆ ನಗರ ಪೊಲೀಸ್ ಠಾಣೆಗೆ ಸಾಕಷ್ಟು ಬಾರಿ ಭೇಟಿ ನೀಡಿ ವಿನಂತಿಸಲಾಗಿದೆ. ಆದರೆ ಈವರೇಗೆ ಮರಣೋತ್ತರ ಪರೀಕ್ಷಾ ವರದಿಯನ್ನು ನೀಡಿರುವುದಿಲ್ಲ ಹಾಗೂ ಮೃತ ಬಾಲಕನ ಸಾವಿನ ಬಗ್ಗೆ ತನಿಖೆ ಯಾವ ರೀತಿ ನಡೆಯುತ್ತಿದೆ ಎಂಬ ಗೊಂದಲವಿದೆ. ಈ ನಿಟ್ಟಿನಲ್ಲಿ ಮೃತ ಬಾಲಕನ ಮರಣೋತ್ತರ ಪರೀಕ್ಷೆ ವರದಿಯನ್ನು ನೀಡಬೇಕು ಹಾಗೂ ಶೀಘ್ರ ತನಿಖೆಯನ್ನು ಕೈಗೊಂಡು, ತಪ್ಪಿತಸ್ಥರ ಮೇಲೆ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಬೇಕೆಂದು ಮೃತ ಬಾಲಕನ ತಂದೆ ಸುನೀಲ್ ಕಂಜಾರಬಾಟ್ ಮತ್ತು ಬಾಲಕನ ಕುಟುಂಬಸ್ಥರಾದ ರೀನಾ ಕಂಜಾರಬಾಟ್ ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ.