ಜೊಯಿಡಾ: ಜೋಯಿಡಾ ತಾಲೂಕಿನ ಕ್ಯಾಸಲ್‌ರಾಕ್ ಗ್ರಾಮ ರೈಲ್ವೆ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಬುಡಕಟ್ಟು ಕುಣಬಿ ಹಾಗೂ ಸಿದ್ದಿ ಮಹಿಳೆಯರ ಮತ್ತು ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ವೀಕ್ಷಿಸಿ, ಬುಡಕಟ್ಟುಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮನಸೋತರು.
ಗವಳಾದೇವಿ ದೇವಸ್ಥಾನದ ಮುಂಭಾಗದಲ್ಲಿ ಜನತಾ ದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ಮುಗಿಸಿ ನಂತರ ರಾತ್ರಿ ಕ್ಯಾಸಲ್‌ರಾಕ್ ಗ್ರಾಮದ ರೇಲ್ವೆ ಸಭಾಭವನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸ್ಥಳಿಯ ಬುಡಕಟ್ಟು ಕುಣಬಿ ಸಮುದಾಯದ ಮೈನೋಳ ಗ್ರಾಮದ ಮಹಿಳೆಯರ ಫುಗಡಿ ತಂಡದ ಮನೋಜ್ಞ ನೃತ್ಯ ಹಾಗೂ ಹಳಿಯಾಳದ ಜೂಲಿಯಾನ ಫರ್ನಾಂಡೀಸ್ ನೇತೃತ್ವದ ಸಿದ್ದಿ ಕಲಾತಂಡದ ಸಿದ್ದಿ ಡಮಾಮಿ ನೃತ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಆನಂತರ ಮಹಿಳೆಯರ ಕಲಾತಂಡಗಳ ಜೊತೆಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಸಹಾಯಕ ಆಯುಕ್ತೆ ಜಯಲಕ್ಷ್ಮಿ ರಾಯಕೋಡ ಬೆರೆತರು. ಕಲಾತಂಡಗಳೊಂದಿನ ಮಹಿಳೆಯರಿಗೆ ಕನ್ನಡ ಬಾರದೇ ಇದ್ದರು ಕುಶಲೋಪರಿ ವಿಚಾರಿಸಿದರು. ಮಹಿಳೆಯರೊಂದಿಗೆ ಕೈಕುಲುಕಿ ಫೋಟೊ ಕ್ಲಿಕ್ಕಿಸಿ ಸಂಸ್ಕೃತಿ, ಸಂಪ್ರದಾಯ ಜೀವಂತ ಇಡಬೇಕೆಂದು ಹೇಳಿದರು. ಜಿಲ್ಲೆಯ ಬುಡಕಟ್ಟು ಸಂಸ್ಕೃತಿ ಶ್ರೀಮಂತವಾಗಿದೆ ಎಂದರು.