ಕಾರವಾರ: ಜಿಲ್ಲೆಯಲ್ಲಿ ಈಗಾಗಲೇ ನದಿ ಪಾತ್ರಗಳಲ್ಲಿ ಗುರುತಿಸಲಾಗಿರುವ ಮರಳು ದಿಬ್ಬಗಳನ್ನು ತೆರವುಗೊಳಿಸಿ, ಜಿಲ್ಲೆಯ ಜನತೆಗೆ ಶೀಘ್ರದಲ್ಲಿ ಮರಳು ವಿತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೂಚನೆ ನೀಡಿದರು.
ಅವರು ಇಂದು ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಸಮರ್ಪಕವಾಗಿ ಮರಳು ದೊರೆಯದ ಹಿನ್ನೆಲೆಯಲ್ಲಿ ವಸತಿ, ಕಟ್ಟಡ ನಿರ್ಮಾಣ ಚಟುವಟಿಕೆಗಳು ಸೇರಿದಂತೆ ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ತೀವ್ರ ತೊಂದರೆಯಾಗಿದ್ದು, ಜನಸಾಮಾನ್ಯರು ಸಮಸ್ಯೆಗಳನ್ನು ಎದುರಿಸುತ್ತಾರೆ. ಮರಳಿನ ಕೊರೆತಯ ಹಿನ್ನಲೆ ಅನಧಿಕೃತ ಹಾಗೂ ಅಕ್ರಮ ಮರಳುಗಾರಿಗೆ ಹಾಗೂ ಸಾಗಾಣಿಕೆೆ ಸಹ ನಡೆಯುತ್ತಿದ್ದು ಇದನ್ನು ನಿಯಂತ್ರಿಸಲು ಮರಳು ವಿತರಣೆಗೆ ಅನುಮತಿ ನೀಡುವುದು ಅತ್ಯಂತ ಅವಶ್ಯಕವೆಂದು ಸಚಿವರು ತಿಳಿಸಿದರು.
ಮರಳು ದಿಬ್ಬಗಳನ್ನು ತೆರವುಗೊಳಿಸಿ, ಮರಳು ವಿತರಿಸುವ ಕುರಿತಂತೆ ಇರುವ ಅಡೆತಡೆಗಳ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೇಂದ್ರ ಕಚೇರಿಯಿಂದ ಅಗತ್ಯ ನಿರ್ದೇಶನಗಳನ್ನು ಪಡೆದು, ಯಾವುದೇ ರೀತಿಯ ಕಾನೂನು ಹಾಗೂ ನಿಯಮಗಳ ಉಲ್ಲಂಘನೆಯಾಗದAತೆ ವ್ಯವಸ್ಥಿತ ರೀತಿಯಲ್ಲಿ ಮರಳು ವಿತರಣೆ ಮಾಡುವ ಕುರಿತು ಕೈಗೊಳ್ಳಬಹುದಾದ ಕ್ರಮಗಳ ಕುರಿತಂತೆ ಪರಿಶೀಲಿಸಿ, ಆದಷ್ಟು ಶೀಘ್ರದಲ್ಲಿ ಜಿಲ್ಲೆಯ ಸಾರ್ವಜನಿಕರಿಗೆ ಮರಳು ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ನಿದೇರ್ಶನಗಳನ್ನು ನೀಡಿದರು.
ಜಿಲ್ಲೆಯಲ್ಲಿ ಈಗಾಗಲೇ ಮೀನುಗಾರಿಕೆ, ಲೋಕೋಪಯೋಗಿ, ಸಿ.ಆರ್.ಝಡ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಂದಾಯ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಎನ್.ಐ.ಟಿ.ಕೆ. ಸುರತ್ಕಲ್ ತಜ್ಞರಿಂದ ಪರಿಶೀಲಿಸಿ ವರದಿ ಪಡೆದಿರುವ, ಕಾರವಾರ ತಾಲೂಕಿನ ಕಾಳಿ ನದಿ ಪಾತ್ರದಲ್ಲಿ 7, ಅಂಕೋಲ ತಾಲೂಕಿನ ಗಂಗಾವಳಿ ನದಿ ಪಾತ್ರದಲ್ಲಿ 2, ಕುಮಟಾ ತಾಲೂಕಿನ ಅಘನಾಶಿನಿ ನದಿ ಪಾತ್ರದಲ್ಲಿ 4 ಮತ್ತು ಹೊನ್ನಾವರ ತಾಲೂಕಿನ ಶರಾವತಿ ನದಿ ಪಾತ್ರದಲ್ಲಿ 7 ಮರಳು ದಿಬ್ಬಗಳು ಸೇರಿದಂತೆ ಒಟ್ಟು 20 ಮರಳು ದಿಬ್ಬಗಳನ್ನು ತೆರವುಗೊಳಿಸಿದ್ದಲ್ಲಿ 12,44,878 ಟನ್ ಮರಳು ದೊರೆಯಲಿದೆ ಎಂದರು. ಮರಳು ದಿಬ್ಬಗಳ ತೆರವುಗೊಳಿಸುವಿಕೆಯಿಂದ ದೊರೆಯುವ ಮರಳನ್ನು ಜಿಲ್ಲೆಯ ಸಾರ್ವಜನಿಕರಿಗೆ ಮತ್ತು ಸಾರ್ವಜನಿಕ ಉದ್ದೇಶಗಳಿಗೆ ಮಾತ್ರ ಬಳಕೆ ಮಾಡುವಂತೆ ತಿಳಿಸಿದ ಸಚಿವರು ಹಾಗೂ ಈ ಮರಳು ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಹೊರಗೆ ಸಾಗಾಣಿಕೆಯಾಗದಂತೆ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್, ಕಂದಾಯ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಆಶಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಹಾಗೂ ಪರಿಸರ, ಮೀನುಗಾರಿಕೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.