ಯಲ್ಲಾಪುರ: ವಿದ್ಯುತ್ ತಂತಿ ಮೇಲೆ ಮರ ಬಿದ್ದು ವಿದ್ಯುತ್ ತಂತಿ ಹಾಗೂ ಕಂಬಗಳಿಗೆ ಹಾನಿಯಾದ ಘಟನೆ ಯಲ್ಲಾಪುರ-ಶಿರಸಿ ರಸ್ತೆಯ ಬೇಡ್ತಿ ಸೇತುವೆ ಬಳಿ ನಡೆದಿದೆ.
ಸೋಮವಾರ ರಾತ್ರಿ ಬೀಸಿದ ಗಾಳಿಯ ಪರಿಣಾಮ ರಸ್ತೆ ಪಕ್ಕ ಇದ್ದ ಒಣಗಿದ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದಿದೆ. ಇದರಿಂದ ಲೈನ್ ಗೆ ಹಾನಿಯಾಗಿದ್ದು, ಎರಡು ಕಂಬಗಳು ಧರೆಗುರುಳಿದ್ದು, ಮರದ ಟೊಂಗೆಗಳು ರಸ್ತೆಯ ಮೇಲೆ ಬಿದ್ದ ಕಾರಣ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶವಿತ್ತು.
ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮರ ತೆರವುಗೊಳಿಸಿ, ವಿದ್ಯುತ್ ಲೈನ್ ಹಾಗೂ ಕಂಬ ಸರಿಪಡಿಸಿ ವಿದ್ಯುತ್ ಸಂಪರ್ಕ ಪುನಃ ಕಲ್ಪಿಸಿದರು.