ಹೊನ್ನಾವರ: ಪಟ್ಟಣದ ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು ,ಯುವ ರೆಡ್ ಕ್ರಾಸ್ ಘಟಕ ಮತ್ತು ಎಚ್.ಡಿ.ಎಫ್.ಸಿ. ಬ್ಯಾಂಕ್ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಆರ್. ಎಸ್.ಹೆಗಡೆ ಸಭಾಭವನದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕು ಆಸ್ಪತ್ರೆ ಆರೋಗ್ಯಾಧಿಕಾರಿ ಉಷಾ ಹಾಸ್ಯಗಾರ ಮಾತನಾಡಿ, ರಕ್ತದಾನ ಶ್ರೇಷ್ಠ ದಾನ. ಯಾಕೆಂದರೆ ರಕ್ತಕ್ಕೆ ಪರ್ಯಾಯವಾಗಿ ಏನನ್ನು ಕಂಡು ಹಿಡಿಯಲಾಗಿಲ್ಲ. 23 ಕೋಟಿಯಷ್ಟು ಆಪರೇಷನ್, 6 ಕೋಟಿಯಷ್ಟು ಆಪರೇಷನ್ ,ತುರ್ತು ರಕ್ತಸ್ರಾವಗಳು ಉಂಟಾದಾಗ ರಕ್ತದ ಅನಿವಾರ್ಯತೆ ಉಂಟಾಗುತ್ತದೆ. ಬ್ಲಡ್ ಬ್ಯಾಂಕ್ ಗಳ ಮೂಲಕ ರಕ್ತ ಸಂಗ್ರಹಣೆ ಮಾಡಲಾಗುತ್ತದೆ. ಬ್ಲಡ್ ಬ್ಯಾಂಕ್ ಗೆ ರಕ್ತ ಬೇಕಾಗುತ್ತದೆ ಹೀಗಾಗಿ ರಕ್ತದಾನ ಮಹತ್ವವನ್ನು ಪಡೆದಿದೆ. ಜೊತೆಗೆ ರಕ್ತದಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಇದೇ ವೇಳೆ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ// ರಾಜೇಶ್ ಕಿಣಿ, ವಿದ್ಯಾರ್ಥಿಗಳಿಗೆ ತಮ್ಮ ರಕ್ತದ ಗುಂಪು ಯಾವುದೆಂದು ತಿಳಿದಿರಬೇಕು. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ರಕ್ತಕ್ಕೆ ಪರ್ಯಾಯ ಇಲ್ಲ. ಚೀನಾದಂತಹ ದೇಶ ಏನೇ ಹೊಸತನ್ನು ಕಂಡುಹಿಡಿದರೂ ಸಹ ರಕ್ತವನ್ನು ಕಂಡುಹಿಡಿಯಲು ಆಗಿಲ್ಲ. ಎಲ್ಲರೂ ರಕ್ತದಾನ ಮಾಡಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಂಜೀವ್ ನಾಯಕ್ ಮಾತನಾಡುತ್ತಾ ಹಣವನ್ನು ಕೊಟ್ಟು ರಕ್ತ ಪಡೆಯಬೇಕಾಗಿತ್ತು. ಆದರೆ ಈಗ ರಕ್ತಕ್ಕೆ ರಕ್ತವನ್ನು ನೀಡುವ ವ್ಯವಸ್ಥೆ ಬಂದಿದೆ. ರಕ್ತದ ಉತ್ಪತ್ತಿ ಆಗಲು ಪೌಷ್ಟಿಕ ಆಹಾರ ಬೇಕು. ಎಲ್ಲರೂ ಸಮ ಪ್ರಮಾಣದಲ್ಲಿ ಆಹಾರವನ್ನು ಪಡೆಯಬೇಕು. ವಿದ್ಯಾರ್ಥಿಗಳು ಮಾನವೀಯ ಕೆಲಸಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.
ಎಚ್.ಡಿ.ಎಫ್.ಸಿ ಅಧಿಕಾರಿ ರಾಘವೇಂದ್ರ ನಾಯ್ಕ, ತಾಲೂಕು ಆಸ್ಪತ್ರೆ ಆಪ್ತಸಮಾಲೋಚಕ ವಿನಾಯಕ ಪಟಗಾರ, ಕಾಲೇಜಿನ ಯೂನಿಯನ್ ಉಪಾಧ್ಯಕ್ಷ ಜಿ.ಎನ್.ಭಟ್ , ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿ ಜೀವನ್ ಕುಮಾರ್ ಶೆಟ್ಟಿ ವೇದಿಕೆ ಮೇಲೆ ಹಾಜರಿದ್ದರು.