Slide
Slide
Slide
previous arrow
next arrow

ಮಕ್ಕಳನ್ನು ರೂಪಿಸುವಲ್ಲಿ ತಾಯಿ ಪಾತ್ರ ಮಹತ್ವದ್ದು: ಮನು ಹಂದಾಡಿ

300x250 AD

ಸರಸ್ವರಿ ಪಪೂ ಕಾಲೇಜಿನಲ್ಲಿ ಜರುಗಿದ ಕಲಾಂಜಲಿ ಕಾರ್ಯಕ್ರಮ – ರಾಗಿ ಬೀಸುವ ಮೂಲಕ ಸಭೆಗೆ ಚಾಲನೆ ನೀಡಿದ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ

ಕುಮಟಾ: ತಾಯಿಯೇ ಜಗತ್ತಿನ ಅತಿದೊಡ್ಡ ಸಾಹಿತಿ, ಕವಯತ್ರಿ ಹಾಗೂ ವರದಿಗಾರ್ತಿಯಾಗಿದ್ದಾಳೆ. ಮಕ್ಕಳನ್ನು ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ವದ್ದು, ಅಂತಹ ತಾಯಿಯನ್ನು ಗೌರವಿಸುವ ಕಾರ್ಯ ಮಕ್ಕಳಿಂದ ಆಗಬೇಕು ಎಂದು ಕುಂದಾಪ್ರ ಕನ್ನಡದ ರಾಯಭಾರಿ ‌ಎಂದೇ ಖ್ಯಾತಿ ಪಡೆದ ಮನು ಹಂದಾಡಿ ಹೇಳಿದರು.

ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹಾಗೂ ವಿಧಾತ್ರಿ ಅಕಾಡೆಮಿ ಮಂಗಳೂರಿನ ಸಹಭಾಗಿತ್ವದ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಜಾನಪದ ಮತ್ತು ಸಾಂಸ್ಕೃತಿಕ ಕಲಾ ವೈಭವ ಕಲಾಂಜಲಿ ಕಾರ್ಯಕ್ರಮದಲ್ಲಿ ಅವರು ಆಶಯ ನುಡಿಗಳನ್ನಾಡಿದರು.

ಮಕ್ಕಳಿಗೆ ಮೊಬೈಲ್ ಗೀಳು ಹೆಚ್ಚುತ್ತಿದೆ. ಕೊರೊನಾ ನಂತರದಲ್ಲಿ ಚಿಕ್ಕ ಚಿಕ್ಕ ಮಕ್ಕಳೂ ಮೊಬೈಲ್ ಗೀಳು ಹಚ್ಚಿಕೊಂಡಿದ್ದಾರೆ. ಸೆನಿಟೈಸರ್, ಮಾಸ್ಕ್‌ಗಳು ಮಾಯವಾದರೂ ಮೊಬೈಲ್ ಮಾಯವಾಗಿಲ್ಲ. ಇದರಿಂದ ಮಾತನಾಡುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಮನೆಯಲ್ಲಿಯೂ ಅತಿಥಿಗಳಿಗೆ ಸ್ವಾಗತಿಸುವ ಸೌಜನ್ಯವೂ ಮರೆಯಾಗಿದೆ. ವಿದ್ಯಾರ್ಥಿಗಳು ಪರಸ್ಪರರಲ್ಲಿ ಮಾತನಾಡುವ ಗುಣ ಬೆಳೆಸಿಕೊಳ್ಳಬೇಕು. ಇದರಿಂದ ಬದುಕು ಹಸಿರಾಗುತ್ತದೆ ಎಂದರು.

ಸರಸ್ವತಿ ಪದವಿಪೂರ್ವ ಕಾಲೇಜು ಅರಳಿ ಮರದಂತೆ ಇದ್ದು, ಇದರ ಆಶ್ರಯದಲ್ಲಿ ಎಲ್ಲರೂ ಬೆಳೆಯಬೇಕು. ಒಳ್ಳೆಯ ಕನಸುಗಳನ್ನು ಕಟ್ಟಿಕೊಂಡು, ಆ ಕನಸಿನ ಸಾಕಾರಕ್ಕೆ ಉಪನ್ಯಾಸಕರ ಬೆಂಬಲ ಪಡೆಯಿರಿ ಎಂದರು. ಮೊಬೈಲ್‌ನಿಂದ ಆಗುವ ದುಷ್ಪರಿಣಾಮಗಳು, ಮಕ್ಕಳು ಯಾವ ರೀತಿಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು? ಸಮಾಜದೊಡನೆ ಮಕ್ಕಳ ಬಾಂಧವ್ಯ ಹೇಗಿರಬೇಕು? ಎಂದು ಮನು ಹಂದಾಡಿ, ಕುಂದಾಪ್ರ ಭಾಷೆಯಲ್ಲಿ ಹಾಸ್ಯದ ಮೂಲಕವೇ ತಿಳಿಸಿದರು. ಜೊತೆಗೆ ತಮ್ಮ ಮಾತಿನ ಕೊನೆಯವರೆಗೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.

ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡ ರಾಗಿ ಬೀಸುವುದರ ಮೂಲಕ ವಿನೂತನವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು. ಗಿಡವನ್ನು ನೆಟ್ಟು ಬೆಳೆಸುವುದರ ಮೂಲಕ ಪರಿಸರ ಬೆಳೆಸಬೇಕು. ಪರಿಸರವನ್ನು ಬೆಳೆಸುವುದೇ ನಿಜವಾದ ಬದುಕಾಗಬೇಕು ಎಂದರು.

300x250 AD

ಸಂಸ್ಥೆಯ ಕಾರ್ಯದರ್ಶಿ ಮರುಳಿಧರ ಪ್ರಭು ಮಾತನಾಡಿ, ಇದೊಂದು ಪ್ರಬುದ್ಧ ಸಭೆಯಾಗಿದ್ದು, ಬದುಕನ್ನೇ ಪಾಠವಾಗಿಸಿದ ತುಳಸಿ ಗೌಡರಂತಹ ಹಿರಿಯರು ಮಾರ್ಗದರ್ಶನ ನೀಡುವುದು ಹಾಗೂ ಮನು ಹಂದಾಡಿ ಅವರ ಆಶಯ ನುಡಿಯನ್ನು ಕೇಳುವುದು ಒಂದು ಸೌಭಾಗ್ಯವಾಗಿದೆ. ಈ ನಿಟ್ಟಿನಲ್ಲಿ ವಿಧಾತ್ರಿಯ ಕಾರ್ಯ ಮೆಚ್ಚುವಂತಹುದು ಎಂದರು. ತುಳಸಿ ಗೌಡ ಹಾಗೂ ಸುಕ್ರಿ ಗೌಡರನ್ನು ನಮ್ಮಲ್ಲಿ ಕರೆಸುವುದು ನಮ್ಮ ಕನಸಾಗಿತ್ತು, ಅದು ಈಗ ಈಡೇರಿದೆ ಎಂದು ಅವರು ಅಭಿಪ್ರಾಯಪಟ್ಟರು‌.

ಜಾನಪದ ವಿದ್ವಾಂಸ ಡಾ.ಎನ್.ಆರ್. ನಾಯಕ ಹಾಜರಿದ್ದು, ಜಾನಪದ ಹಾಗೂ ಪಾರಂಪರಿಕ ವಿಚಾರದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಪ್ರಾಂಶುಪಾಲ ಕಿರಣ ಭಟ್ಟ ಎಲ್ಲರನ್ನೂ ಸ್ವಾಗತಿಸಿದರು. ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ ಸಂಸ್ಥೆಯ ಕುರಿತಾಗಿ ವಿವರಿಸಿ, ಗಣ್ಯರನ್ನು ಪರಿಚಯಿಸಿ, ಪ್ರಾಸ್ತಾವಿಕ ನುಡಿ ನುಡಿದರು. ಸಾಂಸ್ಕೃತಿಕ ವಿಭಾಗದ ಸಂಯೋಜಕ ಗುರುರಾಜ ಶೆಟ್ಟಿ ವಂದಿಸಿದರು. ಉಪ ಪ್ರಾಂಶುಪಾಲೆ ಸುಜಾತಾ ಹೆಗಡೆ ವೇದಿಕೆಯಲ್ಲಿದ್ದರು. ಗಣೇಶ ಜೋಶಿ ನಿರೂಪಿಸಿದರು.

ವಿದ್ಯಾರ್ಥಿಗಳು ಜಾನಪದ ಕಲೆಯ ವಿವಿಧ ಪ್ರಕಾರಗಳನ್ನು ಅಭಿನಯಿಸಿ ಗೀತ, ಗಾಯನ ನೃತ್ಯದ ಮೂಲಕ ಗಮನ ಸೆಳೆದರು. ಪಾರಂಪರಿಕ ಹಾಗೂ ಸಾಂಪ್ರದಾಯಿಕ ವಸ್ತುಗಳು, ವೇಷಭೂಷಣಗಳು, ಯಕ್ಷಗಾನ ಪ್ರಸಾದನಗಳು, ಪಾರಂಪರಿಕ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಸಮಾರಂಭದ ಕಳೆ ಹೆಚ್ಚಿಸಿತ್ತು.

ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಸರಸ್ವತಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು, ಪಾಲಕರು, ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Share This
300x250 AD
300x250 AD
300x250 AD
Back to top