ಸಿದ್ದಾಪುರ: ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದರ ಜೊತೆಗೆ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ದಿನನಿತ್ಯದ ಕೆಲಸ, ಕಾರ್ಯದಲ್ಲಿ ಉತ್ಸಾಹದಿಂದ ತೊಡಗಿಕೊಳ್ಳಲು ಸಾಧ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಕಡಿಕೇರಿ ಕಾನಳ್ಳಿಯ ಸುಭಾಷಚಂದ್ರ ಬೋಸ್ ಕ್ರೀಡಾಂಗಣದಲ್ಲಿ ತಾಲೂಕು ಪತ್ರಕರ್ತ ಸಂಘದವರು ಆಯೋಜಿಸಿದ್ದ ನಾಲ್ಕನೇ ವರ್ಷದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧ ಇಲಾಖೆಗಳ ನಡುವಿನ ಇಂತಹ ಪಂದ್ಯಗಳಿಂದ ಇಲಾಖೆಗಳ ನಡುವಿನ ಸಮನ್ವಯತೆ ಹೆಚ್ಚಾಗಿ ಸಾರ್ವಜನಿಕರ ಕೆಲಸಗಳಿಗೆ ಮತ್ತಷ್ಟು ಸಹಕಾರಿಯಾಗಲಿ ಎಂದರು.
ತಹಸೀಲ್ದಾರ ಎಂ.ಆರ್ ಕುಲಕರ್ಣಿ, ಬೇಡ್ಕಣಿ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ ಮಡಿವಾಳ ಕಡಿಕೇರಿ ಮಾತನಾಡಿದರು. ತಾಲ್ಲೂಕು ಪಂಚಾಯತಿ ಇ.ಒ ದೇವರಾಜ ಹಿತ್ತಕೊಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ.ನಾಯ್ಕ, ಹೆಸ್ಕಾಂ ಎಇಇ ನಾಗರಾಜ್ ಪಾಟೀಲ್, ದೈಹಿಕ ಪರೀಕ್ಷಕ ಎಂ.ವಿ.ನಾಯ್ಕ, ತಾಲ್ಲೂಕು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ, ಪ್ರಮುಖರಾದ ಪಾಂಡುರಂಗ ನಾಯ್ಕ, ಬಾಲಕೃಷ್ಣ ನಾಯ್ಕ ಪಾಲ್ಗೊಂಡಿದ್ದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ ಯಶವಂತ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಸ್ವಾಗತಿಸಿ, ನಿರೂಪಿಸಿದರು. ಪತ್ರಕರ್ತ ನಾಗರಾಜ ಮಾಳ್ಕೊಡ ವಂದಿಸಿದರು.