ಶಿರಸಿ: ಇಲ್ಲಿನ ಮರಾಠಿಕೊಪ್ಪದ ಅಜಿತ ಮನೋಚೇತನಾ ಟ್ರಸ್ಟ್ ವಿಕಾಸ ವಿಶೇಷ ಶಾಲೆಯಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮವನ್ನು ಡಿ.08ರಂದು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತೃ ಮಂಡಳಿಯ ಭಾರತಿ ಸಂಗಡಿಗರು ಗೀತೆಯ 10 ನೇ ಅಧ್ಯಾಯದ ಶ್ಲೋಕಗಳನ್ನು ವಿಶೇಷ ಮಕ್ಕಳಿಗೆ ಕಲಿಸಿಕೊಟ್ಟರು.
ಗೀತಾ ಅಭಿಯಾನದ ಶಿರಸಿ ತಾ. ಅಧ್ಯಕ್ಷ ಪ್ರೋ. ಕೆ.ವಿ ಭಟ್ ಪ್ರತೀ ವರ್ಷವೂ ಅಜಿತ ಮನೋಚೇತನಾ ಸಂಸ್ಥೆಯವರು ವಿಶೇಷ ಮಕ್ಕಳಿಗೆ ಭಗವದ್ಗೀತೆ ಹೇಳಿಕೊಡುವ ಕಾರ್ಯಕ್ರಮ ನಡೆಸುತ್ತಾರೆ. ಈ ಮಕ್ಕಳಿಗೆ ಒಳ್ಳೆಯ ತರಬೇತಿ ಸಿಗುತ್ತದೆ. ಪೂಜ್ಯ ಸ್ವರ್ಣವಲ್ಲಿ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಡಿಸೆಂಬರ್ 22 ರಂದು ಗೀತಾ ಸಮರ್ಪಣ ಸಮಾವೇಶ ನಡೆಯಲಿದೆ ಎಂಬ ಮಾಹಿತಿ ನೀಡಿದರು.
ಗೀತಾ ಪಠಣ ಕಾರ್ಯಕ್ರಮಕ್ಕೆ ಮೊದಲು ಶಿವಮೊಗ್ಗದ ಖ್ಯಾತ ಮನಃಶಾಸ್ತ್ರಜ್ಞೆ ಡಾ.ಕೆ.ಎಸ್ ಪವಿತ್ರಾ ಅಜಿತ ಮನೋಚೇತನಾ ವಿಕಾಸ ಶಾಲೆಗೆ ಭೇಟಿ ನೀಡಿ ಶಿಕ್ಷಕರು, ಮತ್ತು ವಿಶೇಷ ಮಕ್ಕಳ ಜೊತೆ ಸಂವಾದ ನಡೆಸಿದರು. ಅಜಿತ ಮನೋಚೇತನಾದ ಸಲಹೆಗಾರ ಡಾ.ಕೇಶವ ಹೆಚ್. ಕೊರ್ಸೆ ಪಾಲ್ಗೊಂಡರು. ಮುಖ್ಯ ಶಿಕ್ಷಕಿ ನರ್ಮದಾ ಹೆಗಡೆ ಸ್ವಾಗತಿಸಿದರು.