ಕಾರವಾರ: ಗೋವಾ ಸರ್ಕಾರ ಮತ್ತು ಆದರ್ಶ ಸಂಘ, ಕಾಣಕೋಣದಲ್ಲಿ ಆಯೋಜಿಸುತ್ತಿರುವ ರಾಷ್ಟ್ರೀಯ ಮಟ್ಟದ ಲೋಕೋತ್ಸವ ಕಾರ್ಯಕ್ರಮದಲ್ಲಿ ಕಾರವಾರದ ನ್ಯಾಯವಾದಿ ನಾಗರಾಜ ನಾಯಕರನ್ನು ಆಹ್ವಾನಿಸಿ, ಪ್ರಶಸ್ತಿ ಸಮೇತ ಸನ್ಮಾನಿಸಲಾಗುತ್ತಿದ್ದು, ಈ ಕಾರ್ಯಕ್ರಮ ಡಿ.9,ಶನಿವಾರದಂದು ನಡೆಯಲಿದೆ.
ಗೋವಾದ ಸಭಾಪತಿಗಳಾದ ರಮೇಶ ತಾವಡ್ಕರ್ ಲೋಕೋತ್ಸವ ಕಮಿಟಿಯ ಅಧ್ಯಕ್ಷರಿದ್ದು ಕಳೆದ 23 ವರ್ಷಗಳಿಂದ ಈ ಕಾರ್ಯಕ್ರಮ ನಡೆದು ಬಂದಿದ್ದು, ಪ್ರಸಿದ್ಧ ವಕೀಲರೂ ಆಗಿರುವ ನಾಗರಾಜ ನಾಯಕರ ಗ್ರಾಮೀಣ ಕಾಳಜಿ ಮತ್ತು ಸಮಾಜ ಸೇವೆಯನ್ನು ನೋಡಿ ಈ ಹೊರರಾಜ್ಯ ಪ್ರಶಸ್ತಿ ನೀಡಲಾಗುತ್ತಿದೆ.
ಗ್ರಾಮೀಣ ಸಂಸ್ಕೃತಿ, ಪರಿಸರ, ಅರಣ್ಯ ಮತ್ತು ಬುಡಕಟ್ಟು ಸಂಸ್ಕೃತಿಗಳನ್ನು ಕಾದಿಟ್ಟುಕೊಂಡು ಬರಲು ಅನೇಕ ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಲೋಕೋತ್ಸವ ಗೋವಾ ರಾಜ್ಯದಲ್ಲಿಯೇ ಬಹಳ ಪ್ರಸಿದ್ಧವಾದದ್ದು.ಲೋಕೋತ್ಸವಕ್ಕೆ ಲಕ್ಷಾಂತರ ಪ್ರವಾಸಿಗರೂ ಸಹ ಬರುತ್ತಿದ್ದು ಗೋವ ಪ್ರವಾಸೋದ್ಯಮಕ್ಕೆ ಸಹ ಉತ್ಸವ ಸಹಾಯಕಾರಿಯಾಗುತ್ತಿದೆ ಎನ್ನಲಾಗಿದೆ. ಗೆಡ್ಡೆ ಗೆಣಸು, ಗಿಡ ಮೂಲಿಕೆ ಔಷಧಿಗಳು ಇತ್ಯಾದಿ ವಸ್ತುಗಳು ಈ ಪಾರಂಪರಿಕ ಉತ್ಸವದಲ್ಲಿ ಗಮನ ಸೆಳೆಯುತ್ತಿವೆ. ನ್ಯಾಯವಾದಿಯಾಗಿಯೂ ಜೀವ ವೈವಿದ್ಯತೆಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ನಾಗರಾಜ ನಾಯಕ ಜೀವ ವೈವಿದ್ಯತೆಗಳ ಕುರಿತು ಅನೇಕ ಲೇಖನಗಳನ್ನೂ ಸಹ ಬರೆದಿದ್ದಾರೆ.