ಶಿರಸಿ: ಇಲ್ಲಿನ ಭಗತ್ ಸಿಂಗ್ ಬ್ರಿಗೇಡ್ ವತಿಯಿಂದ ನಗರದಲ್ಲಿ ಜನವರಿ 7ರಂದು ರಾಜ್ಯಮಟ್ಟದ ಮ್ಯಾರಥಾನ್ ಓಟ ಸಂಘಟಿಸಲಾಗಿದೆ.
ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸಂಘಟನೆ ಅಧ್ಯಕ್ಷ ಸುಭಾಷ್ ನಾಯ್ಕ ಮಾಹಿತಿ ನೀಡಿ, ಜನರಲ್ಲಿ ಒಗ್ಗಟ್ಟು, ಸೌಹಾರ್ದತೆ ಮೂಡಿಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ಮ್ಯಾರಥಾನ್ ಓಟ ಆಯೋಜಿಸಲಾಗುತ್ತಿದೆ. ಬ್ರಿಗೇಡ್ ಜತೆ ಆತ್ಮೀಯ ಸೇವಾ ಟ್ರಸ್ಟ್, ಜೀವಜಲ ಕಾರ್ಯಪಡೆ, ಅಂಜನಾದ್ರಿ ಗೆಳೆಯರ ಬಳಗ, ರೆಡ್ ಆ್ಯಂಟ್, ಎಸ್.ಎಂ.ಸರ್ವೀಸ್ ಸಹಕಾರದಲ್ಲಿ 7 ಕಿ.ಮೀ. ಓಟ ಆಯೋಜಿಸಲಾಗಿದ್ದು, ಅಂದು ಬೆಳಿಗ್ಗೆ 6.30ಕ್ಕೆ ಮರಾಠಿಕೊಪ್ಪದ ಭಾರತ್ ಮಾತಾ ಸರ್ಕಲ್’ನಿಂದ ಮ್ಯಾರಥಾನ್ ಪ್ರಾರಂಭವಾಗಲಿದೆ. ಒಂದು ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ವಯೋಮಿತಿ ಆಧಾರದಲ್ಲಿ ಮ್ಯಾರಥಾನ್ ನಡೆಯಲಿದೆ. ಎಲ್ಲ ವಿಭಾಗದಲ್ಲೂ ಪ್ರತ್ಯೇಕ ಬಹುಮಾನ ನೀಡಲಾಗುವುದು. ಒಟ್ಟೂ ₹55 ಸಾವಿರ ಬಹುಮಾನ ಮೊತ್ತವಿದೆ. ವಿಜೇತರಿಗೆ ನಗದು ಹಾಗೂ ಟ್ರೋಫಿ ನೀಡಲಾಗುವುದು ಎಂದ ಅವರು, ನೋಂದಣಿ ಆದ ಸ್ಪರ್ಧಾಳುಗಳಿಗೆ ಮಾತ್ರ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಮೊದಲು ನೋಂದಣಿಯಾದ 100 ಜನರಿಗೆ ಟಿ ಶರ್ಟ್ ನೀಡಲಾಗುವುದು. ಮ್ಯಾರಥಾನ್ ಮುಕ್ತಾಯಗೊಳಿಸುವ ಮೊದಲ 100 ಜನರಿಗೆ ಆಯೋಜಕರ ಪರವಾಗಿ ಪ್ರಮಾಣಪತ್ರ ಹಾಗೂ ಮೆಡಲ್ ನೀಡಲಾಗುವುದು. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ ಅಭಿಷೇಕ್ ಶೆಟ್ಟಿ (Tel:+918197360979), ಕಿಶನ್ ಪಿಳೈ (Tel:+919353237551), ಸುಭಾಷ್ ನಾಯ್ಕ (Tel:+919739429637) ಸಂಪರ್ಕಿಸಬಹುದು. ಹೆಸರು ನೋಂದಣಿಗೆ ಡಿ.31 ಕೊನೆಯ ದಿನವಾಗಿದೆ ಎಂದರು.
ಈ ವೇಳೆ ರವಿಚಂದ್ರ ಶೆಟ್ಟಿ, ಮಹೇಶ ನಾಯ್ಕ, ಮೋಹನ ನೇತ್ರೇಕರ್ ಮತ್ತಿತರರು ಪಾಲ್ಗೊಂಡಿದ್ದರು.