ಯಲ್ಲಾಪುರ: ಕೇವಲ ದುಡ್ಡಿನಿಂದ ರಾಜಕೀಯ ಮಾಡುತ್ತೇವೆ ಎನ್ನುವ ಭ್ರಮೆಯನ್ನು ದೂರಮಾಡಲು ಕಾರ್ಯಕರ್ತರು ಒಗ್ಗೂಡಿಸಿ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಯಲ್ಲಾಪುರ ಕ್ಷೇತ್ರದ ಉಸ್ತುವಾರಿ ಮಾಜಿ ಶಾಸಕ ವಿ.ಎಸ್. ಪಾಟೀಲ್ ಹೇಳಿದರು.
ಅವರು ಗುರುವಾರ ಪಟ್ಟಣದ ಕಲ್ಮಠದಲ್ಲಿ ನೂತನ ಬ್ಲಾಕ್ ಕಚೇರಿಯಲ್ಲಿ ಕಿರವತ್ತಿ ಭಾಗದ ಮುಖಂಡ ವಿಲ್ಸನ್ ಫರ್ನಾಂಡೀಸ್ ಹಾಗೂ ಇತರ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಶಾಸಕರೇ ಎಲ್ಲ ಸ್ಥಾನಿಕ ಅಧಿಕಾರ ಬಳಸಿಕೊಂಡು ಅಧಿಕಾರ ವಿಕೇಂದ್ರೀಕರಣವ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಆಡಳಿತದಲ್ಲಿ ಬೇರೆಯವರ ಹಸ್ತಕ್ಷೇಪ ಇರಬಾರದು. ಸಂಘಟನೆಯ ಮುಖಾಂತರ ಪಕ್ಷ ಬಲಪಡಿಸಬೇಕು ಎಂದರು.
ಕಾಂಗ್ರೆಸ್ ಮುಖಂಡ ಟಿ. ಸಿ. ಗಾಂವ್ಕಾರ ಮಾತನಾಡಿ, ದ್ರೋಹ ಮಾಡಿ ಪಕ್ಷದಿಂದ ಹೊರಕ್ಕೆ ಹೋದವರು ಪಕ್ಷಕ್ಕೆ ಅಗತ್ಯ ಇಲ್ಲ. ಹಳಬರು ಹೊಸಬರು ಬೇಧ ಇಲ್ಲದೇ ಒಗ್ಗೂಡಿ ಕೆಲಸಮಾಡಬೇಕು ಎಂದರು.
ಬ್ಲಾಕ್ ಅಧ್ಯಕ್ಷ ಎನ್ ಕೆ ಭಟ್ಟ ಮೆಣಸು ಪಾಲ್ ಅಧ್ಯಕ್ಷತೆ ವಹಿಸಿ, ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತ ಬಂದಿರುವ ಕಾಂಗ್ರೆಸ್ ಸರಕಾರಕ್ಕೆ ಮಹಿಳೆಯರು ಶಕ್ತಿ ತುಂಬುವ ಕೆಲಸ ಆಗಬೇಕು ಎಂದರು.
ಪಕ್ಷ ಸೇರ್ಪಡೆ ಗೊಂಡ ವಿಲ್ಸನ್ ಫರ್ನಾಂಡೀಸ್ ಮಾತನಾಡಿ,ತಾವು ಕಾಂಗ್ರೆಸ್ ಪಕ್ಷಕ್ಕೆ ಪಕ್ಷದ ಸಿದ್ದಾಂತ ಒಪ್ಪಿ ಬಂದಿದ್ದು,ಇದು ಟ್ರೈಲರ್ ಮಾತ್ರ ಇನ್ನೂ ದೊಡ್ಡ ಪ್ರಮಾಣದಲ್ಲಿ ಕಾರ್ಯಕರ್ತರನ್ನು ಸೇರಿಸುವುದಾಗಿ ಹೇಳಿದರು.
ಕಾಂಗ್ರೆಸ್ ಮುಖಂಡರಾದ ಉಲ್ಲಾಸ ಶಾನಭಾಗ,ರವಿ ನಾಯ್ಕ,ರಾಘವೇಂದ್ರ ಭಟ್ಟ ಹಾಸಣಗಿ, ನರಸಿಂಹ ನಾಯ್ಕ ಉಮಚಗಿ,ವಿ ಎಸ್ ಭಟ್ ಉಪಳೇಶ್ವರ, ನೂರ್ ಅಹಮ್ಮದ್,ಅನಿಲ್ ಮರಾಠೆ,ಪೂಜಾ ನೇತ್ರೇಕರ್, ಮುಂತಾದವರು ಇದ್ದರು.
ಕಿರವತ್ತಿ ಭಾಗದ ವಿಲ್ಸನ್ ಫರ್ನಾಂಡೀಸ್,ಚೆನ್ನಪ್ಪ,ಸಾವಕ್ಕ,ದ್ಯಾಮಕ್ಕ,ಅಲೆಕ್ಸ್ ಸಿದ್ದಿ,ರಂಜಿತ್ ಜಾದವ್,ಸಲಿಂ ಹಾಗೂ ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಮೆಚ್ಚಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.