ಯಲ್ಲಾಪುರ: ಅರಣ್ಯ ಇಲಾಖೆಯಲ್ಲಿ ಇತ್ತೀಚೆಗೆ ಕರೆದಿರುವ 540 ಫಾರೇಸ್ಟ್ ಗಾರ್ಡ್ ಹುದ್ದೆ ನೇಮಕಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ ಕಳುಹಿಸಬೇಕಾಗಿದ್ದು, ಆದರೆ ಸೈಬರ್ ಸೇಂಟರ್‌ನವರು ತಪ್ಪುತಪ್ಪು ಮಾಹಿತಿಗಳನ್ನು ತುಂಬುವುದರಿಂದಾಗಿ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ.
ಇಲ್ಲಿಯ ಪದವಿ ಕಾಲೇಜಿನ ವಿದ್ಯಾರ್ಥಿ ಯಲ್ಲಾಪುರ ಪಟ್ಟಣದ ನಿವಾಸಿ, ಅಭಯ ಜಗದೀಶ ನಾಯಕ ಭಾನುವಾರ ಪಟ್ಟಣದ ಹೊಸ ಸೈಬರ್ ಸೆಂಟರ್‌ನಲ್ಲಿ ಆನ್‌ಲೈನ್ ಅರ್ಜಿ ತುಂಬಲು ತೆರಳಿದ್ದರು. ಕಂಪ್ಯೂಟರ್‌ನಲ್ಲಿ ಆಧಾರ್ ಕಾರ್ಡ್ ಹಾಗೂ ಜನ್ಮ ದಿನಾಂಕವನ್ನು ತಪ್ಪು ನಮೂದಿಸಿ, ಅಪ್ಡೇಟ್ ಮಾಡಿದ ಕಂಪ್ಯೂಟರ್ ಆಪರೇಟರ್‌ನಿಂದಾಗಿ ಅವಕಾಶ ವಂಚಿತವಾಗಿದ್ದಾರೆ. ತುಂಬಿರುವ ಅರ್ಜಿಯನ್ನು ಎಡಿಟ್ ಮಾಡಲು ಅಥವಾ ಮತ್ತೆ ಹೊಸದಾಗಿ ಅರ್ಜಿ ತುಂಬಲು ಯಾವುದೇ ಅವಕಾಶ ಇಲ್ಲದೇ ಇರುವುದರಿಂದ ಅಭಯ ನಾಯಕಗೆ ಅನ್ಯಾಯವಾಗಿದೆ.
ಈಗ ಈ ಬಗ್ಗೆ ಮತ್ತೊಮ್ಮೆ ಆನಲೈನ್ ಅರ್ಜಿ ತುಂಬಲು ಅವಕಾಶ ಮಾಡಿಕೊಡಬೇಕು ಎಂದು ಅವರು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಸಿಬ್ಬಂದಿ ಮತ್ತು ನೇಮಕಾತಿ) ಬೆಂಗಳೂರು, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಆಡಳಿತ) ಬೆಂಗಳೂರು, ಅರಣ್ಯ ಸಂರಕ್ಷಣಾಧಿಕಾರಿಗಳು ಕೆನರಾ ವೃತ್ತ, ಶಿರಸಿ ಇವರಿಗೆ ಇ ಮೇಲ್ ಮೂಲಕ ಮನವಿ ರವಾನಿಸಿ, ಆಗ್ರಹಿಸಿದ್ದಾರೆ