ಕಾರವಾರ: ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಿನ್ನೆಲೆಯಿಂದ ಬಂದಿರುವ ನ್ಯಾಯವಾದಿ ನಾಗರಾಜ ನಾಯಕ ಒಬ್ಬ ಗಟ್ಟಿ ಹೋರಾಟಗಾರ ಎನ್ನುವದನ್ನು ಯಾರೂ ಅಲ್ಲಗಳೆಯುವದಿಲ್ಲ. ತನ್ನ ವಿದ್ಯಾರ್ಥಿ ಜೀವನದಿಂದ ಹೋರಾಟದ ಮನೋಭಾವನೆಯನ್ನು ಹೊತ್ತು ಬಂದಿರುವ ನಾಗರಾಜ ನಾಯಕರ ಹೋರಾಟದಲ್ಲಿ ನ್ಯಾಯ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.
ನಾಗರಾಜ ನಾಯಕ ಯಾವುದೋ ಅನ್ಯ ಉದ್ದೇಶಕ್ಕೆ ಅಥವಾ ಲಾಭ ಮಾಡಿಕೊಳ್ಳಲೋ ಹೋರಾಟ ನಡೆಸುವವರಲ್ಲ. ಇವರ ಹೋರಾಟ ಸದಾ ಸಮಾಜಮುಖಿಯಾಗಿರುತ್ತದೆ. ಕಾರವಾರದಲ್ಲಿ ವೈದ್ಯಕೀಯ ಕಾಲೇಜ್ ಇವತ್ತು ಬಂದಿದ್ದರೆ, ಅದು ನಾಗರಾಜ ನಾಯಕರ ನೇತೃತ್ವದ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯ ಹೋರಾಟದಿಂದ ಮಾತ್ರ. ಈ ಸಮಿತಿಗೆ ನಾಗರಾಜ ನಾಯಕರು ಅಧ್ಯಕ್ಷರಾಗಿದ್ದರು. ವೈದ್ಯಕೀಯ ಕಾಲೇಜಿಗಾಗಿ ಇವರು ಮಾಡಿದ, ನಡೆಸಿದ ಅಭಿಯಾನಗಳು ಅಪಾರ.
ಮಳೆಗಾಲದಲ್ಲೋಮ್ಮೆ ಇಡೀ ಕಾರವಾರವೇ ನಿಬ್ಬೆರಗಾಗುವಂತೆ ಜನ ಸೇರಿಸಿ, ಹೋರಾಟ ಮಾಡಿದ್ದರು. ಅನೇಕ ಭಾರಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ವೈದ್ಯಕೀಯ ಕಾಲೇಜಿನ ಅನಿವಾರ್ಯತೆ ಬಗ್ಗೆ ತಿಳಿಸಿ ಹೇಳಿದ್ದರು. ಇಂದು ಕಾರವಾರದ ವೈದ್ಯಕೀಯ ಕಾಲೇಜು ಅನೇಕ ಜನರಿಗೆ ಸೇವೆ ನೀಡುತ್ತಿಡೆಯೆಂದರೆ ಅದರ ಹಿಂದೆ ನಾಗರಾಜ ನಾಯಕರ ಬೆವರಿದೆ.
ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷರನ್ನು ಅವಧಿ ಮೊದಲೇ ವರ್ಗಾಯಿಸಿದಾಗ ದೊಡ್ಡ ಹೋರಾಟ ನಡೆಸಿ, ಸರ್ಕಾರಕ್ಜೆ ಚಳಿ ಬಿಡಿಸಿದ್ದರು. ಸಂಪೂರ್ಣ ಜಿಲ್ಲಾಧಿಕಾರಿಗಳ ಆವರಣದಲ್ಲಿ ಜನ ಜಾತ್ರೆಯನ್ನೇ ಮಾಡಿದ್ದರು. ಹಿಡಿದ ಕೆಲಸ ಬಿಡದ ನ್ಯಾಯವಾದಿ ನಾಗರಾಜ ನಾಯಕರು, ಕಾರವಾರದಲ್ಲಿ ಹಠಕ್ಕೆ ಬಿದ್ದವರಂತೆ ಕಾರವಾರ ಕ್ಲೀನ್ ಮಾಡಿಯೇ ಸಿದ್ಧ ಎನ್ನುವಷ್ಟರ ಮಟ್ಟಿಗೆ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಈ ಹೋರಾಟಗಾರನಿಗೆ ಸಂಸತ್ತಿನಲ್ಲಿ ಕಾಣಲು ಜಿಲ್ಲೆಯ ಜನ ಅಪೇಕ್ಷಿಸುತ್ತಿದ್ದು, ನಾಗರಾಜ ನಾಯಕ ಸಂಸದ ಸದಸ್ಯನಾದರೆ ಜಿಲ್ಲೆಗೆ ಹೊಸ ಭವಿಷ್ಯ ತರುತ್ತಾರೆ ಎಂಬುದು ಜನರ ಅಂಬೊಣವಾಗಿದೆ.