Slide
Slide
Slide
previous arrow
next arrow

ಪ್ರಾಚಾರ್ಯ ಡಾ.ಪ್ರೇಮಾನಂದ ಹೊನ್ನಾವರಗೆ ಬೀಳ್ಕೊಡುಗೆ

300x250 AD

ಹೊನ್ನಾವರ: ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಎಂ.ಪಿ.ಇ.ಸೊಸೈಟಿ ವತಿಯಿಂದ ಪ್ರಾಚಾರ್ಯ ಡಾ.ಪ್ರೇಮಾನಂದ ಹೊನ್ನಾವರ ಇವರ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಆಡಳಿತ ಮಂಡಳಿ ವತಿಯಿಂದ ಡಾ.ಪಿ.ಎಂ.ಹೊನ್ನಾವರ ಅವರಿಗೆ ಶಾಲು ಹೊದಿಸಿ, ಗೌರವಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಇವರು 1986 ರಲ್ಲಿ ಉಪನ್ಯಾಸಕರಾಗಿ ಸೇರಿ ಸುದೀರ್ಘ 37 ವರ್ಷಗಳ ಕಾಲ ಎಸ್.ಡಿ.ಎಂ.ಕಾಲೇಜಿನಲ್ಲಿ ದುಡಿದವರು. 6 ತಿಂಗಳ ಕಾಲ ಪ್ರಾಚಾರ್ಯರಾಗಿ ದುಡಿದು, ನಿವೃತ್ತಿ ಹೊಂದಿದರು. ಎಸ್.ಡಿ.ಎಂ.ಕಾಲೇಜಿನಲ್ಲಿ ಪಿಯುಸಿ ಹಾಗೂ ಪದವಿಯನ್ನು ಕಲಿತು, ಇದೇ ಕಾಲೇಜಿನಲ್ಲಿ ವಿವಿಧ ಹುದ್ದೆಗಳನ್ನು ಏರಿ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ. ರಸಾಯನ ಶಾಸ್ತ್ರ ಉಪನ್ಯಾಸಕರಾಗಿ ಕಾಲೇಜಿನ ಶ್ರೇಯಸ್ಸಿಗೆ ದುಡಿದವರು. ಕಾಲೇಜಿಗೆ A+ ಶ್ರೇಣಿ ಬರಲು ಪಿ.ಎಂ.ಹೊನ್ನಾವರ ಅವರ ಕೊಡುಗೆ ದೊಡ್ಡದಿದೆ.

ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಡಾ. ಪಿ.ಎಂ.ಹೊನ್ನಾವರ ಡಾ.ಎಂ.ಪಿ.ಕರ್ಕಿ ಅವರನ್ನು ನೆನಪಿಸಿಕೊಂಡರು. ಗದ್ಗದಿತ ಧ್ವನಿಗಳಲ್ಲೇ ಮಾತನಾಡಿದ ಪಿ.ಎಂ.ಹೊನ್ನಾವರ ಅಂತರಾಳದ ಮಾತುಗಳನ್ನಾಡಿದರು. ಕಾಲೇಜಿನ ಬಗೆಗಿನ ನೆನಪುಗಳನ್ನು ಹಂಚಿಕೊಂಡರು. ತಂತ್ರಜ್ಞಾನ ಮಾನವನನ್ನು ಹೇಗೆ ಬದಲಾಯಿಸುತ್ತದೆ ಎನ್ನುವುದನ್ನು ದೃಷ್ಟಾಂತದ ಮೂಲಕ ಪ್ರಸ್ತುತ ಪಡಿಸಿದರು. ಅಲ್ಲದೇ, ತಾವು ಕಾಲೇಜಿನ ಜೊತೆಗಿನ ಸಂಬಂಧವನ್ನು ಮುಂದುವರಿಸುತ್ತೇನೆ. ಕಾಲೇಜಿನಲ್ಲಿರುವ ಸ್ನಾತಕ ಸಂಶೋಧನಾ ಕೇಂದ್ರದಲ್ಲಿ ತಮ್ಮ ಸಂಶೋಧನೆ ಮುಂದುವರೆಸುವ ಇಚ್ಛೆ ವ್ಯಕ್ತಪಡಿಸಿ, ತನ್ನಿಂದ ಯಾವ ಕೆಲಸ ಆಗಬೇಕು ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಪಿ.ಇ.ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ ಮಾತನಾಡಿ, ಡಾ.ಪಿ.ಎಂ.ಹೊನ್ನಾವರ ಅವರ ಕಾರ್ಯಶೈಲಿ ಸ್ಮರಿಸಿದರು. ಪಿ.ಎಂ.ಹೊನ್ನಾವರ ಅವರು ಕಾಲೇಜಿಗೆ ಅತ್ಯಂತ ಪ್ರಾಮಾಣಿಕವಾಗಿ ದುಡಿದವರು. ಅವರು ನಮ್ಮ ಜೊತೆ ಮುಂದೆಯೂ ಮುಂದುವರಿಯಲಿ. ನಮ್ಮ ಸಂಸ್ಥೆಗೆ ಅವರ ಸಹಕಾರ ಬೇಕು ಎಂದರು.

300x250 AD

ಡಾ. ಪಿ.ಎಂ.ಹೊನ್ನಾವರ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರ ಬಗ್ಗೆ ಅಭಿನಂದನ ನುಡಿಗಳನ್ನು ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಡಿ.ಎಲ್.ಹೆಬ್ಬಾರ್ ನುಡಿದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಸಂಜೀವ್ ನಾಯ್ಕ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸುರೇಶ್ ಎಸ್. ಡಾ.ಪಿ.ಎಂ.ಹೊನ್ನಾವರ ಅವರಿಗೆ ಶುಭ ಹಾರೈಸಿದರು.

ಎಂ.ಪಿ.ಇ.ಸೊಸೈಟಿ ಕಾರ್ಯದರ್ಶಿ ಎಸ್.ಎಂ.ಭಟ್ಟ ಸ್ವಾಗತಿಸಿದರು. ಸಂಗೀತ ವಿಭಾಗದ ಉಪನ್ಯಾಸಕಿ ಸಂಗೀತ ನಾಯ್ಕ ಪ್ರಾರ್ಥಿಸಿದರು. ಜಂಟಿ ಕಾರ್ಯದರ್ಶಿ ಜಿ.ಪಿ.ಹೆಗಡೆ ವಂದಿಸಿದರು.

Share This
300x250 AD
300x250 AD
300x250 AD
Back to top