ಸಿದ್ದಾಪುರ: ರೈತರಿಗೆ ಸಮಾಜದಲ್ಲಿ ಸರಿಯಾದ ಗೌರವ ಸಿಗದ ಕಾರಣ ಇಂದು ಕೃಷಿಕ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಸಮಾಜದಲ್ಲಿ ಎಲ್ಲರಿಗಿಂತ ಹೆಚ್ಚಿನ ಗೌರವ ಅನ್ನ ನೀಡುವ ರೈತರಿಗೆ ಸಿಗಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಕೃಷಿ ಇಲಾಖೆ ವತಿಯಿಂದ ಫಲಾನುಭವಿ ರೈತರಿಗೆ ವಿವಿಧ ಯೋಜನೆಯಡಿ ಸಹಾಯಧನ ಮಂಜೂರಾತಿ ಪತ್ರ, ಕೃಷಿ ಪರಿಕರಗಳ ವಿತರಣೆ ಹಾಗೂ ಆತ್ಮಯೋಜನೆಯಡಿ ಪರಿಶಿಷ್ಟ ಜಾತಿ ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು.
ರೈತರು ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ರೈತರಿಗೆ ಅವಶ್ಯವಾಗಿ ಬೇಕಾಗಿರುವ ನೀರು ಹಾಗೂ ವಿದ್ಯುತ್ ಸರಿಯಾಗಿ ನೀಡಬೇಕು. ರೈತರಿಗೆ ಸರ್ಕಾರದಿಂದ ನೀಡುವ ಸಲಕರಣೆಗಳಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆ ನಿಗದಿಪಡಿಸಿ ನಂತರ ಸಬ್ಸಿಡಿ ನೀಡಿ ಮಾರುಕಟ್ಟೆ ದರಕ್ಕೆ ನೀಡಲಾಗುತ್ತಿದೆ. ಇದು ರೈತರಿಗೆ ಮಾಡುತ್ತಿರುವ ದ್ರೋಹ. ಇದನ್ನು ಸರಿಪಡಿಸಲು ಕ್ರಮ ವಹಿಸಬೇಕಾಗಿದೆ ಎಂದರು.
ಇದೇ ವೇಳೆ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಭಾಜನರಾದ ಪಿ.ಎಸ್.ಭಟ್ ಮುತ್ತಿಗೆ, ಮತ್ತು ತಾಲ್ಲೂಕು ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಭಾಜನರಾದ ರಾಮಚಂದ್ರ ಹೆಗಡೆ, ಕಿರಣ ನಾಯ್ಕ ಕ್ಯಾದಗಿ, ಪುರುಷೋತ್ತಮ ನಾಯ್ಕ ಕಿಲಾರ ಇವರಿಗೆ ಶಾಸಕ ಭೀಮಣ್ಣ ನಾಯ್ಕ ಪ್ರಶಸ್ತಿ ಪತ್ರ ಪ್ರದಾನ ಮಾಡಿದರು.
ಕೋರ್ಲಕಟ್ಟಾ ಗ್ರಾ.ಪಂ ಅಧ್ಯಕ್ಷ ನಟರಾಜ ಜಿಡ್ಡಿ, ಸೀಮಾ ಹೆಗಡೆ, ಸುರೇಂದ್ರ ಗೌಡ, ಹನುಮಂತ ನಾಯ್ಕ, ಬಾಬು ನಾಯ್ಕ ಇದ್ದರು.
ಸಹಾಯಕ ಕೃಷಿ ನಿರ್ದೇಶಕಿ ಸುಮಾ.ಎಸ್.ಎಂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್ ನಿರೂಪಿಸಿದರು.