ಹೊನ್ನಾವರ: ತಾಲೂಕಿನ ಚರ್ಚ್‌ರಸ್ತೆ (ಬಿಕಾಸಿ ತಾರಿ) ಯಲ್ಲಿ ಪ್ರವಾಸಿಗರಿಂದ ಆಗುತ್ತಿರುವ ವಾಹನ ದಟ್ಟಣೆ ಮತ್ತು ಪ್ರವಾಸಿಗರು ಬರುವುದನ್ನು ಬಂದ್ ಮಾಡಬೇಕು ಎಂದು ಪಟ್ಟಣದ ಚರ್ಚ ರಸ್ತೆಯ ನಿವಾಸಿಗಳು, ಸಮಸ್ತ ಖಾರ್ವಿ ಸಮಾಜದವರು ಇತ್ತೀಚಿಗೆ ತಹಸೀಲ್ದಾರವರಿಗೆ ಮನವಿ ನೀಡಿ ಕೆಲವು ದಿನದ ಗಡುವು ನೀಡಿದ್ದರು. ಮನವಿಗೆ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಮಂಗಳವಾರ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮೀನುಗಾರ ಮುಖಂಡ ಉಮೇಶ ಮೇಸ್ತ ಮಾತನಾಡಿ ಕೆಲವು ದಿನದ ಹಿಂದೆ ಸಾರ್ವಜನಿಕರು ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಯವರಿಗೆ ಇನ್ನುಳಿದ ಇಲಾಖೆಗೆ ರಸ್ತೆ ನಿರ್ಮಾಣ, ದೊಡ್ಡ ವಾಹನ ಬರದಂತೆ ತಡೆಯುವುದು, ಬೋಟಿಂಗ್ ಬಂದ್, ಹೋಮ್ ಸ್ಟೇ ಅನುಮತಿ ರದ್ದುಗೊಳಿಸಲು ಗಡುವು ನೀಡಿ ಮನವಿ ಕೊಟ್ಟಿದ್ದರೂ, ಯಾವ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಹಾಗಾಗಿ ಸಾರ್ವನಿಕರೊಂದಿಗೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ರಸ್ತೆಯಲ್ಲಿ ಸಂಚರಿಸುವ ಟೂರಿಸ್ಟರು ಬಾಟಲಿ ಎಸೆದು ಹೋಗುತ್ತಾರೆ. ಕಂಡಲ್ಲಿ ಪ್ಲಾಸ್ಟಿಕ್ ಇನ್ನಿತರೆ ವಸ್ತುಗಳನ್ನು ಬಿಸಾಕುತ್ತಿದ್ದಾರೆ. ಇಲ್ಲೇ ಹೋಂ ಸ್ಟೇ ಅಂತ ಪ್ರಾರಂಭವಾಗಿದೆ. ಎಲ್ಲಿಂದಲೋ ಬರುತ್ತಾರೆ. ಮಧ್ಯರಾತ್ರಿಯಲ್ಲಿಯೂ ಕುಸ್ತಿ, ಮಸ್ತಿ ಮಾಡುತ್ತಾರೆ. ಒಂದು ವೇಳೆ ಹೆಚ್ಚು ಕಮ್ಮಿ ಆದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಮೀನುಗಾರಿಕೆ ಆಗ್ತಾ ಇಲ್ಲ. ಸಿಆರ್ಜಡ್ ಅಂತ ಹೇಳಿ ಮೀನುಗಾರಿಕೆಗೆ, ಮನೆ ಕಟ್ಟಲು ಅನುಮತಿ ಇಲ್ಲ. ಸಿಆರ್ಜಡ್ ವ್ಯಾಪ್ತಿಯಲ್ಲಿ ಹೋಂ ಸ್ಟೇ ಮಾಡಲು ಹೇಗೆ ಅವಕಾಶ ಕೊಟ್ಟಿದ್ದೀರಿ. ನಮಗೆ ಇಲ್ಲಿ ಹೋಂ ಸ್ಟೇ, ಬೋಟಿಂಗ್ ಬೇಡ. ನ್ಯಾಯ ಸಿಗದೆ ಹೋದರೆ ನಾವೇ ಪರಿಹಾರ ತೆಗೆದುಕೊಳ್ಳಬೇಕಾಗುತ್ತದೆ. ನಾಲ್ಕು ದಿನದಲ್ಲಿ ರಸ್ತೆ ದುರಸ್ತಿ ಮಾಡುತ್ತೇನೆ ಹೇಳಿದ್ದಾರೆ. ನಮ್ಮ ಸಮಸ್ಯೆಗೆ ನ್ಯಾಯ ಸಿಗದೆ ಇದ್ದಲ್ಲಿ ತಹಶೀಲ್ದಾರ್ ಮತ್ತು ಪ ಪಂ.ಮುಖ್ಯಾಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶ್ರೀಕಾಂತ ಮೇಸ್ತ ಮಾತನಾಡಿ, ಒಂದು ವಾರದ ಹಿಂದೆ ನೀಡಿದ ಮನವಿಗೆ ಬೆಲೆ ಕೊಟ್ಟಿಲ್ಲ. ಸ್ಥಳಕ್ಕೆ ತಹಸೀಲ್ದಾರ್ ಕೂಡ ಬಂದು ಪರಿಶೀಲನೆ ಮಾಡಿಲ್ಲ. ಜಾಗದ ಪಹಣಿ ತೆಗೆದರೆ ಸಿಆರ್ಜಡ್ ಜಾಗ ಎಂದು ತೋರಿಸುತ್ತದೆ. ಇಂತಹ ಪ್ರದೇಶದಲ್ಲಿ ಹೋಮ್ ಸ್ಟೇ, ಬೋಟಿಂಗ್ ಗೆ ಅನುಮತಿ ಕೊಟ್ಟಿದ್ದಾರೆ. ಅನುಮತಿ ಕೊಟ್ಟವರು ಯಾರು, ಹೇಗೆ ಅನುಮತಿ ಕೊಟ್ಟರು, ಹೀಗೆ ಮುಂದುವರಿದಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದರು.
ಆಟೋ ಚಾಲಕ ನಿತೀನ್ ಮಾತನಾಡಿ, ರಸ್ತೆ ಹದಗೆಟ್ಟು ಹೋಗಿದೆ. ವಾಹನ ಸಂಚಾರ ಮಾಡಲು, ಜನರು ಓಡಾಡಲು ಆಗುತ್ತಿಲ್ಲ. ಹೋಮ್ ಸ್ಟೇ ನೆಪದಲ್ಲಿ ಗಾಂಜಾ ಸೇವನೆ ನಡೆಯುತ್ತಿದೆ. ಬೀಯರ್ ಕುಡಿದು ಬಾಟಲಿ ಬಿಸಾಕಿ ಹೋಗುತ್ತಿದ್ದಾರೆ. ಈ ಎಲ್ಲಾ ಸಮಸ್ಯೆ ತಕ್ಷಣ ಸರಿಪಡಿಸಿ ಕೊಡಬೇಕು ಎಂದು ಆರೋಪಿಸಿದರು.
ಸ್ಥಳೀಯ ಮಹಿಳೆಯೊಬ್ಬರು ಮಾತನಾಡಿ, ಚರ್ಚ್ ರಸ್ತೆಯಲ್ಲಿ ನಾಲ್ಕು ವರ್ಷದಿಂದ ಮನೆ ಮನೆಗೆ ದೂಳು ನುಗ್ಗುತ್ತಿದೆ. ಗರ್ಭಿಣಿಯರು ಓಡಾಡುವ ಹಾಗಿಲ್ಲ. ನಾವೆಲ್ಲ ಸೇರಿ ಮನವಿ ನೀಡಿದರೂ, ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ. ಶ್ರೀಮಂತರಿಗೆ ಒಂದು ಬಡವರಿಗೆ ಒಂದು ಎನ್ನುವ ರೀತಿಯಲ್ಲಿ ಮಾಡುತ್ತಿದ್ದಾರೆ. ಬೋಟಿಂಗ್ ಮತ್ತು ಹೋಮ್ ಸ್ಟೆ ಬಂದಾಗಬೇಕು. ತಾರಿ ಹತ್ತಿರ ಹೋಗಲು ಭಯ ಆಗುತ್ತಿದೆ. ಮಹಿಳೆಯರು, ಪುರುಷರು ಅಶ್ಲೀಲವಾಗಿ ಓಡಾಡುತ್ತಿದ್ದಾರೆ. ಇಷ್ಟು ವರ್ಷ ವಾಸ್ತವ್ಯ ಮಾಡಿಕೊಂಡಿದ್ದ ಸ್ಥಳೀಯ ಮಹಿಳೆಯರು ಹೊರಗಡೆ ಓಡಾಡಲು ಭಯಪಡುವ ಪರಿಸ್ಥಿತಿ ಉಂಟಾಗಿದೆ ಎಂದರು.
ತಹಶೀಲ್ದಾರ್ ರವಿರಾಜ ದೀಕ್ಷಿತ್, ಪ ಪಂ. ಮುಖ್ಯಾಧಿಕಾರಿ ಪ್ರವೀಣಕುಮಾರ, ಪಿಎಸ್ಐ ಮಹಾಂತೇಶ್ ನಾಯ್ಕ ಪ್ರತಿಭಟನೆ ನಿರತರ ಅಹವಾಲು ಕೇಳಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಕೇಶವ ಮೇಸ್ತ, ಶೇಖರ್ ಮೇಸ್ತ, ಗಣಪತಿ ಮೇಸ್ತ, ಸ್ಟೆಪನ್ ರೊಡ್ರಿಗಿಸ್, ನಿತಿನ್ ಪಾಲೇಕರ್, ಸತೀಶ್ ಮೇಸ್ತ, ಸೇವಂತಿ ಮೇಸ್ತ, ಮರಿಯಾ ಗೊನ್ಸಾಲ್ವಿಸ್, ರೊನಾಲ್ಡ್ ಡಿಸೋಜಾ ಮತ್ತಿತರಿದ್ದರು. ಸ್ಥಳೀಯ ಮಹಿಳೆಯರು, ಪುರುಷರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.