ಮುಂಡಗೋಡ: ಜಿಲ್ಲೆಗೆ ಮಾರಕವಾಗಿರುವ ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಅವಶ್ಯ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸರಕಾರದ ಮೇಲೆ ಒತ್ತಡ ತರಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
ಅವರು ಡಿ.2 ಶಿರಸಿಯಲ್ಲಿ ಜರುಗುವ ಕಸ್ತೂರಿ ರಂಗನ್ ವರದಿ ವಿರೋಧ ಜಾಥದ ಪೂರ್ವಭಾವಿ ಸಭೆಯಲ್ಲಿ ಅರಣ್ಯವಾಸಿಗಳನ್ನು ಉದ್ದೇಶಿಸಿ ಮೇಲಿನಂತೆ ಮಾತನಾಡುತ್ತಿದ್ದರು.
ಪಶ್ಚಿಮ ಘಟ್ಟ ಮತ್ತು ಕರಾವಳಿ ಪ್ರದೇಶದಲ್ಲಿ ಜನಜೀವನ ಪ್ರದೇಶವನ್ನ ಕಸ್ತೂರಿ ರಂಗನ್ ವರದಿಯಲ್ಲಿ ಸೂಕ್ಷ್ಮ ಪ್ರದೇಶಕ್ಕೆ ಸೇರ್ಪಟ್ಟಿರುವುದರಿಂದ, ಗ್ರಾಮೀಣ ಭಾಗದ ಜನರ ಜೀವನಕ್ಕೆ ಧಕ್ಕೆ ಉಂಟಾಗುವುದರಿಂದ, ಸರಕಾರದ ಮೇಲೆ ವರದಿ ತಿರಸ್ಕರಿಸುವ ಕುರಿತು ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಬೇಕೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಶಿವಾನಂದ ಜೋಗಿ, ಮಲ್ಲಿಕಾರ್ಜುನ ಓಣಿಕೇರಿ, ಅರ್ಜುನ್ ಓಣಿಕೇರಿ, ಯಾಕೂಬ್ ಬಾಯ್ ಚೌಡಳ್ಳಿ, ಚಂದ್ರಶೇಖರ್ ಚಿಗಳ್ಳಿ, ಕೈಸಾರ್ ಅಹಮ್ಮದ್ ಕಲಕೇರಿ, ಹಸನ್ ಸಾಬ್ ಚಂದನಗಿರಿ, ಅಲ್ಲಾಭಕ್ಷ ನಂದಿಕಟ್ಟಾ ಮುಂತಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಹೋರಾಟ ಅನಿವಾರ್ಯ:
ಕೇಂದ್ರ ಸರಕಾರ ಜನರ ಭಾವನೆಗೆ ಸ್ಪಂದಿಸದಿದ್ದಲ್ಲಿ ತೀವ್ರ ತರದ ಹೋರಾಟ ಮಾಡುವುದು ಅನಿವಾರ್ಯವಾದೀತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಕಸ್ತೂರಿ ರಂಗನ್ ವರದಿ ತಿರಸ್ಕರಿಸುವ ಕುರಿತು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಬೇಕೆಂದು ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.