ಅಂಕೋಲಾ: ಭಾರತೀಯ ಕ್ರಿಕೆಟ್ ತಂಡದ ತರಬೇತುದಾರ ಥ್ರೋ ಡೌನ್ ಪರಿಣಿತ ರಾಘು ದೀವಗಿ ತಾಲೂಕಿನ ವೀರ ವಿಠ್ಠಲ ಮಠಕ್ಕೆ ಭೇಟಿ ನೀಡಿ ಪರ್ತಗಾಳಿ ಜೀವೋತ್ತಮ ಮಠದ ಪೀಠಾಧಿಪತಿ ಶ್ರೀಮದ್ ವಿದ್ಯಾಧೀಶತೀರ್ಥ ವಡೇರ ಅವರ ಆಶೀರ್ವಾದ ಪಡೆದರು.
ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಾಗಿ ಬಿಡುವಿಲ್ಲದ ತರಬೇತಿ ಕಾರ್ಯಕ್ರಮದಲ್ಲಿ ನಿರತರಾಗಿದ್ದ ರಾಘು ಇದೀಗ ಪಂದ್ಯಾವಳಿ ಮುಗಿದ ನಂತರ ಕೊಂಚ ಬಿಡುವು ಮಾಡಿಕೊಂಡು ಊರಿಗೆ ಆಗಮಿಸಿದ್ದಾರೆ. ಪರ್ತಗಾಳಿ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು , ಆಗಾಗ ಮೂಲ ಮಠಕ್ಕೆ ಭೇಟಿ ನೀಡುತ್ತ ಬಂದಿರುವ ರಾಘು ದೀವಗಿ ಇದೀಗ ಪರ್ತಗಾಳಿ ಮಠಾಧೀಶರು ಅಂಕೋಲಾದ ಶಾಖಾ ಮಠಕ್ಕೆ ಆಗಮಿಸಿರುವ ಕಾರಣ ವೀರ ವಿಠ್ಠಲ ಮಠಕ್ಕೆ ಭೇಟಿ ನೀಡಿ ಪರ್ತಗಾಳಿ ಶ್ರೀಗಳ ದರ್ಶನ ಮತ್ತು ಆಶೀರ್ವಾದ ಪಡೆದರು.
ಮಠಕ್ಕೆ ಆಗಮಿಸಿರುವ ರಾಘವೇಂದ್ರ ದೀವಗಿ ಅವರನ್ನು ಸ್ಥಳೀಯ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖರು, ಯುವ ವಾಹಿನಿಯ ಪ್ರಮುಖರು, ಸ್ವಯಂ ಸೇವಕರು ಆದರದಿಂದ ಬರಮಾಡಿಕೊಂಡರು ಎಲ್ಲರೊಂದಿಗೆ ನಗುತ್ತಲೇ ಪೋಟೋ ತೆಗೆದುಕೊಂಡ ರಾಘು ಭಾರತೀಯ ಕ್ರಿಕೆಟ್ ತಂಡದಲ್ಲಿ ತಮ್ಮ ಜವಾಬ್ದಾರಿಯ ಕುರಿತು ತಿಳಿಸಿದರು. ಕುಮಟಾ ತಾಲೂಕಿನ ರಾಘವೇಂದ್ರ ದೀವಗಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದಿದ್ದು ಇವರ ನಿಖರವಾದ ಥ್ರೋ ಡೌನ್ ಎಸೆತಗಳು ತಂಡದ ಬ್ಯಾಟಿಂಗ್ ಅಭ್ಯಾಸಕ್ಕೆ ಸಹಾಯಕವಾಗಿದೆ ಎಂದು ತಂಡದ ಖ್ಯಾತ ಆಟಗಾರರು ಸದಾ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.