ಯಲ್ಲಾಪುರ: ಇಂಗ್ಲೀಷ್ ಸಾಹಿತ್ಯದ ಪ್ರಭಾವದಿಂದಾಗಿ ಆಧುನಿಕ ಕನ್ನಡ ಸಾಹಿತ್ಯ ಹುಟ್ಟಿಕೊಂಡಿದ್ದು,ಕನ್ನಡ ಸಾಹಿತ್ಯದ ಮೇಲೆ ಇಂಗ್ಲಿಷ್ ಪ್ರಭಾವ ಗಾಢವಾಗಿದೆ ಎಂದು ವಿಶ್ವದರ್ಶನ ಕಾಲೇಜಿನ ಪ್ರಾಂಶುಪಾಲ ಡಾ. ದತ್ತಾತ್ರೇಯ ಗಾಂವ್ಕರ್ ಹೇಳಿದರು.
ಅವರು ಗುರುವಾರ ತಾಲೂಕಿನ ಬಿಸಗೋಡ ಪ್ರೌಢಶಾಲೆಯ ಸಭಾಭವನದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಕನ್ನಡ ಕಾರ್ತಿಕ ೨೦೨೩ ಅನುದಿನ ಅನುದಿನ ಅನುಸ್ಪಂದನ ಅಂಗವಾಗಿ ಆಧುನಿಕ ಕನ್ನಡ ಸಾಹಿತ್ಯ ಕುರಿತು ಉಪನ್ಯಾಸ ನೀಡಿ, ನವೋದಯ ಸಾಹಿತ್ಯದ ಬೆಳವಣಿಗೆಗೆ ಬಿ.ಎಂ.ಶ್ರೀಕಂಠಯ್ಯ ಇಂಗ್ಲೀಷ್ ಗೀತೆಗಳು ಪ್ರಭಾವ ಬೀರಿವೆ. ನವೋದಯ, ನವ್ಯ, ಬಂಡಾಯ, ಎಡ ಬಲಪಂಥೀಯ ವಿಚಾರಧಾರೆ ನಂತರ ಸ್ತ್ರೀ ಪರ ಚಿಂತನೆಗಳು ಸಾಹಿತ್ಯದಲ್ಲಿ ಹೆಚ್ಚು ಪ್ರಚಲಿತವಾಗುತ್ತಿದೆ ಎಂದರು.
ಆನಗೋಡ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಭಟ್ಟ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ ಸಾಹಿತ್ಯದ ಬಗೆಗೆ ಉದಾಸೀನ ತೋರದೇ ಭಾಷೆಯ ಮೂಲಕ ಬಾಂಧವ್ಯ ಬಲಗೊಳಿಸಬೇಕು ಎಂದರು. ಕಸಾಪ ತಾಲೂಕಾ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ,ಸಾಹಿತ್ಯ ಪರಿಷತ್ ಹೆಚ್ಚು ಜನರನ್ನು ತಲುಪಬೇಕೆನ್ನುವ ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಾಹಿತ್ಯಿಕ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಎಸ್ ಡಿ ಎಂಸಿ ಅಧ್ಯಕ್ಷ ಗಣಪತಿ ಭಟ್, ಮುಖ್ಯಾಧ್ಯಾಪಕ ಎಂ ಆರ್ ನಾಯಕ, ಪ್ರಮುಖರಾದ ದತ್ತಾತ್ರೇಯ ಭಟ್,ಶ್ರೀಧರ ಹೆಗಡೆ,ಸಂಜೀವಕುಮಾರ ಹೊಸ್ಕೇರಿ, ಗಣಪತಿ ಭಟ್,ಶಾಲಿನಿ ನಾಯ್ಕ,ಡಿ ಎನ್ ಗಾಂವ್ಕಾರ ಭಾಗವಹಿಸಿದ್ದರು.