ಅಂಕೋಲಾ: ತಾಲೂಕಿನ ಶಿರಗುಂಜಿ ಗ್ರಾಮದ ಉಳಗದ್ದೆಯಲ್ಲಿ ಹುಲಿಯಮ್ಮ ಎಮ್. ಗೌಡ ಎಂಬುವವರ ಮನೆಯೊಳಗೆ ಕಾಳಿಂಗ ಸರ್ಪವೊಂದು ಅಡಗಿ ಕುಳಿತಿದ್ದ ಘಟನೆ ನಡೆದಿದೆ. ಮನೆಯೊಳಗಿನ ಟಿವಿ ಟೇಬಲ್ಲಿನ ಕೆಳಗೆ ಕಾಳಿಂಗ ಸರ್ಪವೊಂದು ಸುತ್ತಿಕೊಂಡಿತ್ತು. ಅದೂ ಮೊದಲು ಸಾಧಾರಣವಾಗಿ ಮನೆಯೊಳಗೆ ಬರುವ ಸಾಮಾನ್ಯ ಹಾವಾಗಿರಬಹುದು ಎಂದು ತಿಳಿಯಲಾಗಿತ್ತಾದರೂ ಸಂಶಯಗೊಂಡ ಮನೆಯವರು ಸ್ಥಳೀಯರಾದ ಮಹೇಂದ್ರ ಹೂವಣ್ಣ ಗೌಡ ಇವರ ಸಹಾಯದಿಂದ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಲಾಯಿತು. ಅರಣ್ಯ ಇಲಾಖೆಯವರು ಬಂದು ಪರಿಶೀಲಿಸಿದಾಗ ಅದು ಸಾಧಾರಣ ಹಾವಾಗಿರದೆ ಭಯಾನಕ ಕಾಳಿಂಗ ಸರ್ಪವಾಗಿತ್ತು. ಅರಣ್ಯ ಇಲಾಖೆಯವರ ನೇತೃತ್ವದಲ್ಲಿ ಕಾಳಿಂಗ ಸರ್ಪವನ್ನು ಸೆರೆಹಿಡಿದು ಅದನ್ನು ಅರಣ್ಯದ ಸುರಕ್ಷಿತ ಪ್ರದೇಶದಲ್ಲಿ ಬಿಡಲಾಯಿತು.