ಶಿರಸಿ: ಸೋಂದಾ ಕೋಣೆಸರದ ಕೆಳಗಿನ ಮನೆಯಲ್ಲಿ ಶ್ರೀಮತಿ ವಿಜಯಾ ಮತ್ತ ಪ್ರಭಾಕರ ಹೆಗಡೆ ದಂಪತಿಗಳು, ಮಾತೋಶ್ರೀ ಸರ್ವೇಶ್ವರಿ ಹೆಗಡೆಯವರ ಪುಣ್ಯತಿಥಿಯ ಅಂಗವಾಗಿ ನ.20ರ ಸಂಜೆ “ಪಂಚವಟಿ’’ ತಾಳಮದ್ದಲೆಯನ್ನು ಕುಟುಂಬ ಸದಸ್ಯರೊಂದಿಗೆ ಸಂಪನ್ನಗೊಳಿಸಿ ಕಲಾ ಪ್ರೀತಿಗೆ ಕಾಣಿಕೆ ನೀಡಿದರು. ಸಿದ್ದಾಪುರದ ಬೆಳಸಲಿಗೆ ಯಕ್ಷ ಕಲಾ ಪ್ರತಿಷ್ಠಾನವು ಕಾರ್ಯಕ್ರಮವನ್ನು ನಡೆಸಿಕೊಟ್ಟಿತು.
ಭಾಗವತ ಸತೀಶ ಹೆಗಡೆ ದಂಟಕಲ್ಲರ ಕಂಠ ಸಿರಿ, ಶ್ರೀಪತಿ ಹೆಗಡೆ ಕಂಚಿಮನೆ ಅವರ ಮದ್ದಲೆಯ ಮಾಂತ್ರಿಕತೆ ಹೆಮ್ಮೇಳ ವೈಭವಕ್ಕೆ ಸಾಕ್ಷಿಯಾಯಿತು. ಯಕ್ಷಗಾನ ವಿದ್ವಾಂಸ ಅರ್ಥಧಾರಿ ಪ್ರೋಫೆಸರ್ ಡಾ. ಜಿ.ಎ.ಹೆಗಡೆ ಸೋಂದಾ ಶ್ರೀರಾಮನಾಗಿ, ತಮ್ಮ ವಾಕ್‌ಚಾತುರ್ಯದಲ್ಲಿ ಉತ್ತಮ ಮಾತಿನ ಮಂಟಪ ನಿರ್ಮಿಸಿ, ಪ್ರೇಕ್ಷರಿಗೆ ಮುದ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಮುನ್ನುಡಿ ನೀಡಿದರು. ಗೀತಾ ಹೆಗಡೆ ಬೆಳಸಲಿಗೆ ಶೂರ್ಪನಖಿಯಾಗಿ ಉತ್ತಮ ಸಂಭಾಷಣೆ ಗೈದು ಮಾತಿನಲ್ಲಿ ಕಚಗುಳಿ ಇಟ್ಟರು.ಲಕ್ಷ್ಮಣ ಮತ್ತು ಮಂಡೋದರಿ ದ್ವಿಪಾತ್ರದಲ್ಲಿ ರಂಜಿಸಿದ ಸುಜಾತ ಹೆಗಡೆ ದಂಟಕಲ್ಲ ಪ್ರೇಕ್ಷಕರ ಮನ ಸೆಳೆದರು. ಕಾತ್ಯಾಯಿನಿ ಹೆಗಡೆ ಅತ್ತಿಕೊಪ್ಪ ರಾವಣನಾಗಿ ವಿಜ್ರಂಭಿಸಿದರು. ನಾಗರತ್ನ ಹೆಗಡೆ ಬೆಳಸಲಿಗೆ ಸೀತೆಯಾಗಿ ಸುಬ್ಬಣ್ಣ ಕಂಚಗಲ್ಲ ಋಷಿಯಾಗಿ ಪಾತ್ರೋಚಿತವಾಗಿ ಅರ್ಥ ಹೇಳಿ ರಂಜಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿಂತಕ ಕೇಶವ ಹೆಗಡೆ ಕೋಣೆಸರ (ಕೊಡ್ಲಗದ್ದೆ) ಎಲ್ಲಾ ಊರಲ್ಲಿಯೂ ತಾಳಮದ್ದಳೆ ಆಗಾಗ ನಡೆಯುತ್ತಿದ್ದರೆ, ಸನಾತನ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. ಉತ್ತಮ ಆಥಿತ್ಯದೊಂದಿಗೆ, ಮನೆಯ ಹಿರಿಯರೆಲ್ಲಾ ಸೇರಿ ಕಲಾ ಕಾಣಿಕೆಯೊಂದಿಗೆ ಕಲಾವಿದರನ್ನು ಪ್ರೀತಿಯಿಂದ ಸನ್ಮಾನಿಸಿದ್ದು ಊರಿನಲ್ಲಿ ಸ್ಮರಣೀಯ ಸಂಗತಿಯಾಗಿ ದಾಖಲಾಗಿಯಿತು. ಕಾರ್ಯಕ್ರಮದ ರೂವಾರಿ ಪ್ರಭಾಕರ ಹೆಗಡೆ ಸ್ವಾಗತಿಸಿದರೆ ಸುಬ್ಬಣ್ಣ ಕಂಚಗಲ್ಲ ಧನ್ಯವಾದ ಸಮರ್ಪಿಸಿದರು.